ಹಾಸನ: ನಾನು ಮತ್ತು ಪ್ರೀತಂ ಗೌಡ ಕಳೆದ ಅವಧಿಯಲ್ಲಿ ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಲ್ಲ ಎಂದು ಇಬ್ಬರನ್ನು ಯಾರೂ ದೂರುವುದಿಲ್ಲ. ಆದರೂ ರಾಜಕಾರಣ ಪಿತೂರಿಗೆ ನಾವು ಬಲಿಯಾದೆವು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದ ಸೀತಾ ರಾಮಾಂಜನೇಯ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡಿಯೂ ರಾಜಕೀಯ ಪಿತೂರಿಗೆ ನಾನು ಮತ್ತು ಪ್ರೀತಂ ಬಲಿಯಾಗಬೇಕಾಯಿತು. ಕೆಲಸ ಮಾಡುವವರೆ ಗೆಲ್ಲುವುದಾದರೆ ನಾವು ಸೋಲಬಾರದಿತ್ತು. ಆದರೆ ರಾಜಕಾರಣದಲ್ಲಿ ಪಿತೂರಿಗಳನ್ನು ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2018ರ ಚುನಾವಣೆಯಲ್ಲಿ ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ 30 ಸಾವಿರಕ್ಕಿಂತ ಅಧಿಕ ಮತ ಪಡೆದಿದ್ದರು. 2023ರಲ್ಲಿ ಕೇವಲ 1700 ಮತ ಪಡೆದರು. ಅದೇ ರೀತಿ ಹಾಸನದಲ್ಲಿ ಕಾಂಗ್ರೆಸ್ 2018ರಲ್ಲಿ 38 ಸಾವಿರ ಓಟು ಪಡೆದರೆ ಈಗ ಕೇವಲ 4 ಸಾವಿರ ಮತ ಪಡೆಯಲಷ್ಟೇ ಶಕ್ತವಾಯಿತು. ಈ ಪಿತೂರಿ ಹೇಗೆ ನಡೆದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಂಬಂಧ ಕೆಡಬಾರದು ಎಂಬ ಉದ್ದೇಶದಿಂದ ನಾವು ವಿಷಕಂಠರಾಗಿದ್ದೇವೆ ಎಂದು ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಕಿಡಿಕಾರಿದರು.
ಹೇಗೆ ಪಿತೂರಿ ನಡೆಯಿತು ಎಂಬುದು ಎಲ್ಲರಿಗೂ ಗೊತ್ತು. ಎಲ್ಲವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದೇವೆ. ರಾಜಕೀಯದಲ್ಲಿ ಇಷ್ಟೂ ತಿಳಿಯದ ಅಮಾಯಕರಲ್ಲ. ತತ್ವ ಸಿದ್ಧಾಂತಗಳ ಮೇಲೆ ನಂಬಿಕೆ ಇಟ್ಟಿರುವ ಕಾರಣಕ್ಕೆ ಎಷ್ಟೇ ನೋವಾದರೂ ಸಹಿಸಿಕೊಂಡಿದ್ದೇವೆ. ರಾಜಕಾರಣದಲ್ಲಿ ಕಷ್ಟ ಸಹಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ನಿಮ್ಮ ಜೀವನದಲ್ಲೂ ವಸಂತ ಕಾಲ ಬಂದೇ ಬರುತ್ತದೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಆತ್ಮಸ್ಥೈರ್ಯ ತುಂಬಿದರು.
ಯಾವುದೇ ತತ್ವ ಸಿದ್ದಾಂತ, ಬದ್ಧತೆ ಇಲ್ಲದ ಪಕ್ಷ ಅಂದರೆ ಅದು ಕಾಂಗ್ರೆಸ್. ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದೇ ಅವರಲ್ಲಿ ಉತ್ತರವಿಲ್ಲದ ಪ್ರಶ್ನೆಯಾಗಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನಲಾಗುತ್ತಿದೆ. ಈ ರೀತಿಯ ಅರಾಜಕತೆಗೆ ರಾಜ್ಯವನ್ನು ತಳ್ಳುವುದು ಸರಿಯಲ್ಲ. ಮೋದಿ ಗ್ಯಾರಂಟಿಯ ಮುಂದೆ ಯಾವ ಗ್ಯಾರಂಟಿಯೂ ಕೆಲಸ ಮಾಡುವುದಿಲ್ಲ. ಕಳೆದ 10 ವರ್ಷದಲ್ಲಿ 34 ಲಕ್ಷ ಕೋಟಿ ರೂ. ಹಣ ವಿವಿಧ ಯೋಜನೆಗಳಿಗೆ ಜನರ ಬ್ಯಾಂಕ್ ಖಾತೆಗೆ ಸೇರಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ. ಆದರೆ ಕಾಂಗ್ರೆಸ್ ಮಾಡಿದ ಭ್ರಷ್ಟಾಚಾರ ಅಷ್ಟಿಷ್ಟಲ್ಲ ಎಂದು ಆರೋಪಿಸಿದರು.
ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗಬೇಕೆಂದು ದೇಶದ ಶೇ. 73 ಜನರು ಬಯಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಯಾವ ತಂತ್ರಗಳು ಫಲ ನೀಡುವುದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರೇ ಎನ್‌ಡಿಎಗೆ 400ಕ್ಕಿಂತ ಹೆಚ್ಚು ಸ್ಥಾನ ಬರಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಮೋದಿ ಅವರ ಆಡಳಿತದತ್ತ ಯಾರೂ ಬೊಟ್ಟು ಮಾಡಲು ಸಾಧ್ಯವಿಲ್ಲ ಎಂದರು.
ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರು ಮಾತನಾಡಿ, ಭ್ರಷ್ಟಾಚಾರ ಮುಕ್ತ ಬೇಲೂರು ಕ್ಷೇತ್ರ ನಿರ್ಮಾಣವಾಗಬೇಕೆನ್ನುವುದೇ ನನ್ನ ಉದ್ದೇಶ. ಆ ಕಾರಣಕ್ಕಾಗಿಯೇ ನಾನು ರಾಜಕಾರಣ ಪ್ರವೇಶಿಸಿದ್ದೇನೆ. 2006ರಲ್ಲಿ ಗಂಡಸಿ ಕ್ಷೇತ್ರದಲ್ಲಿ 800 ಮತ ಪಡೆದಿದ್ದ ಸಾಮಾನ್ಯ ವ್ಯಕ್ತಿ ಈಗ ಕ್ಷೇತ್ರದ ಶಾಸಕ ಆಗಿದ್ದಾನೆ ಎಂದರೆ ಅದಕ್ಕೆ ಬಿಜೆಪಿ ಕಾರ್ಯಕರ್ತರು ನೀಡಿದ ಬೆಂಬಲವೇ ಕಾರಣ. ಈ ಬಾರಿಯೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು. ಅದಕ್ಕಾಗಿ ಕಂಕಣಬದ್ಧರಾಗಿ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿ-ಜೆಡಿಎಸ್‌ನ ರಾಷ್ಟ್ರೀಯ ನಾಯಕರು ಒಟ್ಟಾಗಿ ಬಿಜೆಪಿಗೆ ಟಿಕೆಟ್ ನೀಡಬೇಕು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಸಹಕರಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಿದ್ದೇಶ ನಾಗೇಂದ್ರ ಅವರಿಗೆ ನಿಕಟಪೂರ್ವ ಅಧ್ಯಕ್ಷರು ಅಧಿಕಾರ ಹಸ್ತಾಂತರಿಸಿದರು. ವೇದಿಕೆ ಕಾರ್ಯಕ್ರಮಕ್ಕು ಮೊದಲು ಸಿ.ಟಿ.ರವಿ ಅವರು ಗೋ ಪೂಜೆ ನೆರವೇರಿಸಿದರು.
ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸಿದ್ದೇಶ ನಾಗೇಂದ್ರ, ವಿಭಾಗ ಸಂಘಟನಾ ಕಾರ್ಯದರ್ಶಿ ಕೃಷ್ಣಾಜಿ ಇತರರಿದ್ದರು.