ಜಿಲ್ಲೆ

ರಾಜಕಾರಣ ನಿಂತ ನೀರಲ್ಲ, ಮುಖ್ಯವೂ ಅಲ್ಲ : ರಾಜ್ಯದ ಹಿತಕ್ಕಾಗಿ ಹೋರಾಟ ಎಂದ ಡಿ.ಕೆ. ಶಿವಕುಮಾರ್

ರಾಮನಗರ: ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಬೇಕು ಎಂದು ಕಾಂಗ್ರೆಸ್ ಆರಂಭಿಸಿರುವ ಮೇಕೆದಾಟು 2.0 ಪಾದಯಾತ್ರೆ ಸೋಮವಾರ 2ನೇ ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಕೆಂಗೇರಿ ತಲುಪಿದೆ.

ಬಿಡದಿ ಪುರಸಭೆ ವ್ಯಾಪ್ತಿಯ ಬಾನಂದೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜಕಾರಣ ನಿಂತ ನೀರಲ್ಲ. ರಾಜಕಾರಣವೆೇ ಮುಖ್ಯ ಅಲ್ಲ. ರಾಜ್ಯದ ಹಿತಕ್ಕೆ ಈ ಹೋರಾಟ ನಡೆಸಲಾಗುತ್ತಿದೆ. ಕನ್ನಡಪರ ಸಂಘಟನೆಗಳು, ರೈತ ಮುಖಂಡರು, ಹೋರಾಟಗಾರರು ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ ಎಂದರು.

ಪಕ್ಷಾತೀತವಾಗಿ ಕಾಂಗ್ರೆಸ್ ಮುಖಂಡತ್ವ ವಹಿಸಿಕೊಂಡು ಹೋರಾಟ ಮಾಡ್ತಿದ್ದೇವೆ. 4 ದಿನದ ಶ್ರಮಕ್ಕೆ 40 ವರ್ಷದ ಪರಿಹಾರ ಸಿಗುತ್ತದೆ. ಬಿಸಿಲು,ಮಳೆ, ಚಳಿ ಇದ್ದರೂ ನಡೀತಿವಿ. ಬೆಂಗಳೂರು ಪಾದಯಾತ್ರೆಗೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಸಲು ಬಿಬಿಎಂಪಿ ಅನುಮತಿ ನೀಡಿದೆ ಎಂದರು.

ಕೋವಿಡ್ ನಿಯಮ ಗಮನದಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ. ಅನುಮತಿ ಕೊಡದೇ ಇದ್ದರೂ ಹೋರಾಟ ಮಾಡುತ್ತೇವೆ. ಬಜರಂಗದಳ ಜತೆಗೆ ಈಶ್ವರಪ್ಪ ಶವಯಾತ್ರೆ ಮಾಡಿ ದಾಂಧಲೆ ಮಾಡಿದ್ದರೂ, ಅವರ ಮೇಲೆ ಇನ್ನೂ ಕೇಸ್ ಹಾಕಿಲ್ಲ. ಎಸ್ಪಿ, ಡಿಸಿ ನಮ್ಮನ್ನ ಹೆದರಿಸ್ತೀನಿ ಅಂದರೆ ಸುಮ್ನೆ ಇರ್ತಿವಾ. ಸ್ವಾಭಿಮಾನಕ್ಕೆ ರಾಷ್ಟ್ರದ ಹಿತಕ್ಕೆ ಹೋರಾಟ ಮಾಡುತ್ತೇವೆ. ಬಜರಂಗದಳದವರು ಸಿಎಂ ಹತ್ತಿರ ಹೋದಾಗ ಕೇಸ್ ವಿತ್ ಡ್ರಾ ಮಾಡ್ತೀನಿ ಅಂತಾ ಹೇಳಿಲ್ವ? ಪಾದಯಾತ್ರೆಯಲ್ಲಿ ಕೇಸ್ ಮಾಡಲಿ, ಜೈಲಿಗೆ ಕೂಡ ಹೋಗ್ತೀವಿ ಎಂದು ಡಿ.ಕೆ. ಶಿವಕುಮಾರ್ ಸವಾಲೆಸೆದರು.

ಈಶ್ವರಪ್ಪ ವಿರುದ್ಧ ಕೆಂಡಾಮಂಡಲ?: ಕಾಂಗ್ರೆಸ್ ನಾಯಕರಿಗೆ ಉದ್ಯೋಗ ಇಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಖಂಡಿತ ನಮಗೆ ಉದ್ಯೋಗ ಇಲ್ಲ. ದೇಶದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದವರು ಈಗ ಮರೆಯಾಗಿದ್ದಾರೆ. ಜನರಿಗೆ ಉದ್ಯೋಗ ಕೊಡೋಕೆ ಈ ಹೋರಾಟ ಮಾಡ್ತಿದ್ದೇವೆ. ಸಿದ್ದರಾಮಯ್ಯ-ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಕೆಂಡಾಮಂಡಲರಾದ ಡಿಕೆಶಿ, ಒಂದು ಒಳ್ಳೆಯ ಮೆಂಟಲ್ ಆಸ್ಪತ್ರೆ ಶಿವಮೊಗ್ಗದಲ್ಲಿ ಇದ್ರೆ ಹೇಳಿ. ಇಲ್ಲ ಅಂದ್ರೆ ನಾನೇ ನಿಮ್ಹಾನ್ಸ್ನಲ್ಲಿ ಒಂದು ಬೆಡ್ ರೆಡಿ ಮಾಡ್ಕೊಡ್ತೀನಿ ಎಂದು ಟೀಕಿಸಿದರು.

ನಾವು 144ನೇ ಸೆಕ್ಷನ್ ಉಲ್ಲಂಸಿಲ್ಲ - ಸಿದ್ದರಾಮಯ್ಯ: ಕಾರ‌್ಯಕರ್ತರೇ ನಮಗೆ ಉತ್ಸಾಹ ತುಂಬುತ್ತಿದ್ದಾರೆ. ಬಳ್ಳಾರಿ ಪಾದಯಾತ್ರೆ ಮಾದರಿಯಲ್ಲಿ ಇದೂ ಸಹ ಸಾರ್ವಜನಿಕ ಉದ್ದೇಶದಿಂದ ಐತಿಹಾಸಿಕ ಯಾತ್ರೆಯಾಗಿದೆ. ಹೀಗಾಗಿ ಟ್ರಾಫಿಕ್ ಸೇರಿ ಸಣ್ಣಪುಟ್ಟ ಸಮಸ್ಯೆಗಳನ್ನು ಜನರು ಸಹಿಸಿಕೊಳ್ಳುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈಶ್ವರಪ್ಪನ ರೀತಿ ಸೆಕ್ಷನ್ 144 ಅನ್ನು ನಾವು ಉಲ್ಲಂಸಿಲ್ಲ. ಹೆಣ ಇಟ್ಟುಕೊಂಡು ಸರ್ಕಾರದ ಆಸ್ತಿಯನ್ನು ಹಾಳು ಮಾಡಿಲ್ಲ. ಅವರಿಗೆ ಮಂತ್ರಿಯಾಗಲು ಯೋಗ್ಯತೆ ಇಲ್ಲ. ಅವರು ರಾಜೀನಾಮೆ ನೀಡುವ ಸಂಬಂಧ ಮುಂದಿನ ಹೋರಾಟವನ್ನು ಸದ್ಯದಲ್ಲೇ ಹೇಳುತ್ತೇನೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಈಶ್ವರಪ್ಪ ಅವರ ಪ್ರಕರಣ ಜನರ ಕೋರ್ಟ್ ಬಳಿ ಇದೆ. ಅವರೇ ತಕ್ಕಪಾಠ ಕಲಿಸುತ್ತಾರೆ ಎಂದರು.

2013ರಲ್ಲಿ ಜೆಡಿಎಸ್ ಇತ್ತು. ಅಂದು ಚುನಾವಣೆ ಎದುರಿಸಿದ್ದೇವೆ. ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಲು ಸಿದ್ಧರಾಗಿದ್ದಾರೆ ಎಂದು ಜೆಡಿಎಸ್ ಕಂಡರೆ ಭಯ ಎಂಬ ಎಚ್‌ಡಿಕೆ ಹೇಳಿಕೆಗೆ ಟಾಂಗ್ ನೀಡಿದರು.

ಬಿಜೆಪಿಗೆ ಬದ್ಧತೆ ಇಲ್ಲ- ಜಿ. ಪರಮೇಶ್ವರ್

ಬಿಡದಿಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್, ಮೇಕೆದಾಟು ಯೋಜನೆ ಜಾರಿ ಸಂಬಂಧ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಬದ್ಧತೆ ಇಲ್ಲ. ನಾವು ಡಿಪಿಆರ್ ಮಾಡಿ ಕೇಂದ್ರಕ್ಕೆ ಕಳಿಸಿದಾಗ, ಯೋಜನೆಯನ್ನು ತಿರಸ್ಕಾರ ಮಾಡಲಿಲ್ಲ, ಕೆಲವು ನ್ಯೂನತೆಗಳನ್ನು ಸರಿಪಡಿಸಿ ಕಳಿಸುವಂತೆ ತಿಳಿಸಲಾಯಿತು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಯಿತು. ಇದಕ್ಕೆ ಪರಿಸರ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಇದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಯೋಜನೆ ಜಾರಿಗೆ ಪರಿಪರಿಯಾಗಿ ಬೇಡಿಕೊಂಡರೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನಿವಾರ್ಯವಾಗಿ ಹೋರಾಟ ಹಮ್ಮಿಕೊಂಡಿದೆ ಎಂದರು ಹೇಳಿದರು.

10 ಸಾವಿರ ಮಂದಿ ಭಾಗಿ: ಭಾನುವಾರ ರಾಮನಗರದಿಂದ ಹೊರಟು ಬಿಡದಿಯಲ್ಲಿ ವಾಸ್ತವ್ಯ ಹೂಡಿದ್ದ ಡಿ.ಕೆ. ಶಿವಕುಮಾರ್ ನೇತೃತ್ವದ ಪಾದಯಾತ್ರಿಗಳು ಸೋಮವಾರ ಬೆಳಗ್ಗೆ ಬಿಡದಿಯಿಂದ ಹೊರಟು ಸುಮಾರು 20 ಕಿ.ಮೀ. ಕ್ರಮಿಸುವ ಮೂಲಕ ಕೆಂಗೇರಿ ತಲುಪಿದರು. ಬಿಡದಿಯ ಬಾನಂದೂರಿನಲ್ಲಿ ವಾಸ್ತವ್ಯ ಹೂಡಿದ್ದ ಡಿ.ಕೆ. ಶಿವಕುಮಾರ್, ಬೆಳಗ್ಗೆ ಭೈರವೈಕ್ಯ ಡಾ. ಬಾಲಗಂಗಾಧರ ನಾಥ ಸ್ವಾಮೀಜಿ ಅವರ ದೇವಾಲಯ, ಆಂಜನೇಯಸ್ವಾಮಿ ಹಾಗೂ ಬಸವನಗುಡಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ತೆರಳಿದರು. ನಂತರ ಮಂಗಳಮುಖಿಯರಿಂದ ಆರತಿ ಮಾಡಿಸಿಕೊಂಡ ಡಿಕೆಶಿ, ನೇಗಿಲು ಹಿಡಿದು ಬೆಳಗ್ಗೆ 10 ಗಂಟೆ ಸುಮಾರಿಗೆ 2ನೇ ದಿನದ ಪಾದಯಾತ್ರೆಗೆ ಚಾಲನೆ ಕೊಟ್ಟರು. ತುಮಕೂರು, ಬೆಂಗಳೂರು ಸೇರಿ 10 ಸಾವಿರ ಮಂದಿ ಭಾಗಿಯಾಗಿದ್ದರು. ಬಿಡದಿ ಸಮೀಪ ಹಕ್ಕಿಪಿಕ್ಕಿ ಸಮುದಾಯದವರು ಕಿ.ಮೀ. ದೂರದವರೆಗೂ ಹೆದ್ದಾರಿಯಲ್ಲಿ ವಿವಿಧ ಬಗೆಯ ರಂಗೋಲಿ ಬಿಡಿಸಿ, ಅದ್ದೂರಿ ಸ್ವಾಗತ ಕೋರಿದರು.

ತಡವಾಗಿ ಬಂದ ಸಿದ್ದು: ಪಾದಯಾತ್ರೆ ಬಿಡದಿಯಿಂದ ಸುಮಾರು 2 ಕಿ.ಮೀ. ಸಾಗಿದ ನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಂಡವನ್ನು ಕೂಡಿಕೊಂಡರು. ಬೈರಮಂಗಲ ಕ್ರಾಸ್‌ನಿಂದ ಕಾಣಿಸಿಕೊಂಡ ಸಿದ್ದರಾಮಯ್ಯ 5 ಕಿ.ಮೀ ನಡೆದು, ಬಳಿಕ ಅಲ್ಲಿಂದ ಕಾರಿನ ಮೂಲಕವೇ ಹೆಜ್ಜಾಲ ಸಮೀಪದ ಡಾ. ರಾಜ್‌ಕುಮಾರ್ ಾರಂಹೌಸ್‌ನಲ್ಲಿ ಊಟ ಮಾಡಿ, ಪಾದಯಾತ್ರಿಗಳಿಗಾಗಿ ಕಾಯುತ್ತಿದ್ದರು.

ಡಿಕೆಶಿಗೆ ಅದ್ದೂರಿ ಸ್ವಾಗತ: ಪಾದಯಾತ್ರೆ ಮಾರ್ಗದುದ್ದಕ್ಕೂ ಡಿ.ಕೆ. ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಇದರ ಹೊರತಾಗಿಯೂ ಮಾಜಿ ಸಿಎಂ ಎಚ್‌ಡಿಕೆ ಅವರ ತೋಟದ ಮನೆ ಬಳಿ ಸಾಗುವಾಗ ಹೂವಿನ ಮಳೆ ಸುರಿಸುವ ಮೂಲಕ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿ ಜೈಕಾರ ಹಾಕಿದರು. ನಂತರ ಅಲ್ಲಿಯೇ ಕೆಲಕಾಲ ನಿಂತ ಡಿಕೆಶಿ ಮತ್ತು ತಂಡ ಕಲ್ಲಂಗಡಿ ತಿಂದು, ಕಬ್ಬಿನ ಹಾಲು ಕುಡಿದು ದಣಿವಾರಿಸಿಕೊಂಡಿತು.

ನಗು ಮೂಡಿಸಿದ ಡಿಕೆಶಿ: ಮಾಗಡಿಯ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಹುತೇಕ ಕಡೆ ಅಭಿಮಾನಿಗಳು ಕೇಕ್ ಕತ್ತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಿರುಪತಿಗೆ ಹೋಗಬೇಕಿದ್ದ ಬಾಲಕೃಷ್ಣ, ಪಾದಯಾತ್ರೆ ಹಿನ್ನೆಲೆಯಲ್ಲಿ ಇಲ್ಲಿನ ದೇವರುಗಳನ್ನು ನೋಡಲು ಬಂದಿದ್ದಾರೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ನೀಡಬೇಕು ಎಂದು ಶಿವಕುಮಾರ್ ಹಾರೈಸಿದರು. ಇನ್ನು ಬಾನಂದೂರಿನಲ್ಲಿ ಎಚ್‌ಸಿಬಿ ಅಕ್ಷರದ ಕೇಕ್ ಕತ್ತರಿಸುವ ವೇಳೆ ಹಾಸ್ಯ ಚಟಾಕಿ ಹಾರಿಸಿದ ಡಿಕೆಶಿ, ಬಾಲಕೃಷ್ಣ ಹುಲಿ ಕಟ್ ಮಾಡಿದ್ದಾರೆ. ನಾನು ಚೆನ್ನಪ್ಪನನ್ನು ಕತ್ತರಿಸುತ್ತೇನೆ. ಸ್ವಾಮೀಜಿಗಳು ಬಾಲಕೃಷ್ಣನನ್ನು ಕತ್ತರಿಸಲಿ ಎಂದು ಎಲ್ಲರ ಮುಖದಲ್ಲಿ ನಗು ಮೂಡಿಸಿದರು.

ಪಾದಯಾತ್ರೆಗೆ ಹೆದ್ದಾರಿ ಪ್ರಯಾಣಿಕರ ಹಿಡಿಶಾಪ: ಪಾದಯಾತ್ರೆ ಸಾಗುವ ಬೆಂಗಳೂರು-ಮೈಸೂರು ಹೆದ್ದಾರಿಯ ಬೆಂಗಳೂರು ಕಡೆಗಿನ ಸಂಚಾರಕ್ಕೆ ಬಂದ್ ಮಾಡಿರುವ ಕಾರಣ ಬಹುತೇಕ ಪ್ರಯಾಣಿಕರು ಪರಿತಪಿಸುವಂತೆ ಆಗಿದೆ. ಮದ್ದೂರಿನಿಂದ ಬಿಡದಿವರೆಗೂ ವಾಹನ ಸಂಚಾರಕ್ಕೆ ತಡೆ ಹಾಕಲಾಗಿದ್ದು, ಸುತ್ತಿ ಬಳಸಿ ಬೆಂಗಳೂರು ಸೇರಬೇಕಾದ ಸಂಕಷ್ಟ ಪ್ರಯಾಣಿಕರದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮಗ್ಯಾಕೆ ತೊಂದರೆ ಕೊಡುತ್ತೀರಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಸಾಮಾನ್ಯವಾಗಿದೆ. ನಡೆದುಕೊಂಡೇ ಆಸ್ಪತ್ರೆ ಮತ್ತಿತರ ಕಡೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ವಿವಿಐಪಿ, ವಿಐಪಿ ವಾಹನಗಳಷ್ಟೇ ಸಂಚರಿಸುತ್ತಿದ್ದವು. ಹೀಗಾಗಿ ಪೊಲೀಸರು ಹಾಗೂ ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಪಾದಯಾತ್ರೆಗೆ ಹಿಡಿಶಾಪ ಹಾಕಿದರು. ಬಸ್‌ಗಳಿಲ್ಲದ ಕಾರಣ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ಜೋತು ಬಿದ್ದು ಪ್ರಯಾಣಿಸಿದರು. ಸ್ವಾಮೀಜಿಗೆ ಕರೆ: ಭಾನುವಾರ ರಾತ್ರಿ ಬಾನಂದೂರಿನಲ್ಲಿಯೇ ವಾಸ್ತವ್ಯ ಹೂಡಿದ್ದ ಡಿ.ಕೆ.ಶಿವಕುಮಾರ್, ಅಲ್ಲಿನ ದೇವಾಲಯಕ್ಕೆ ಬರುತ್ತಿದ್ದಂತೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಕರೆ ಮಾಡಿ ಮಾತನಾಡಿದರು. 40 ವರ್ಷಗಳ ಬಳಿಕ ಹಂಡೆ ನೀರಿನ ಸ್ನಾನ ಮಾಡಿದೆ ಎಂದು ಸ್ವಾಮೀಜಿಗಳೊಂದಿಗೆ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.

ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಂಗೋಲಿ ಹಾಕಿ ಸ್ವಾಗತಿಸಿರುವುದು ಭಾವನಾತ್ಮಕ ವಿಚಾರ. ಅವರ ಋಣ ನಮ್ಮ ಮೇಲಿದೆ. ಅದನ್ನು ತೀರಿಸುವ ಸಲುವಾಗಿ ಕೆಲಸ ಮಾಡುತ್ತೇವೆ. ಡಿ.ಕೆ. ಸುರೇಶ್, ಸಂಸದ

ಇಂದು ಎಲ್ಲೆಲ್ಲಿ ಯಾತ್ರೆ?: ಮಂಗಳವಾರ ಬೆಳಗ್ಗೆ ಜ್ಞಾನ ಭಾರತಿ ಮೆಟ್ರೋ ಸ್ಟೇಷನ್ ಬಳಿಯಿಂದ ಆರಂಭವಾಗಿ ನಾಯಂಡಹಳ್ಳಿ, ಪೆಸೆಟ್ ಕಾಲೇಜು ಜಂಕ್ಷನ್, ಕತ್ರಿಗುಪ್ಪೆ ಮುಖ್ಯರಸ್ತೆ ಜಂಕ್ಷನ್, ಕದಿರೇನಹಳ್ಳಿ, ಬನಶಂಕರಿ ದೇವಾಲಯ, ಜಯದೇವ ಆಸ್ಪತ್ರೆ ಬಳಿ ಸಾಗಲಿದೆ.