ವಿಜಯವಾಣಿ ಸುದ್ದಿಜಾಲ ಧಾರವಾಡ
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಕಾನೂನುಗಳು ಜಾರಿಗೆ ತರುವ ಕೇಂದ್ರದ ಪ್ರಯತ್ನದ ಇಂದಿನ ರಾಜಕೀಯ ಧೋರಣೆ ನಿರಂಕುಶ ಪ್ರಭುತ್ವವನ್ನು ಪ್ರತಿಪಾದಿಸಿ ರಾಜ್ಯ ಸರ್ಕಾರಗಳ ಸ್ವಾಯತ್ತತೆ ಕಸಿದುಕೊಳ್ಳುತ್ತಿದೆ ಎಂದು ನ್ಯಾಯವಾದಿ ಪಿ.ಎಚ್. ನೀರಲಕೇರಿ ಖೇದ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ರಾಚಪ್ಪ ಹಡಪದ ದತ್ತಿ ನಿಮಿತ್ತ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ರಾಜಕೀಯ ಪರಿಸ್ಥಿತಿ: ಅಂದು-ಇಂದು ಕುರಿತು ಉಪನ್ಯಾಸ ನೀಡಿದರು.
ಒಕ್ಕೂಟ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಹೋರಾಟ ಮಾಡಿದ ಶಾಂತವೀರ ಗೋಪಾಲಗೌಡ, ಜಯಪ್ರಕಾಶ ನಾರಾಯಣ, ಚಂದ್ರಶೇಖರ, ಮೊರಾರ್ಜಿ ದೇಸಾಯಿ ಅಂತಹ ಹಿರಿಯರನ್ನು ಸ್ಮರಿಸಬೇಕು. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ತುರ್ತು ಪರಿಸ್ಥಿತಿ ಎದುರಿಸುವ ಸಂದರ್ಭದಲ್ಲಿ ಈ ಭಾಗದ ದೊಡ್ಡ ಹೋರಾಟಗಾರರಾಗಿ ದಿ. ರಾಚಪ್ಪ ಹಡಪದ ಸೇವೆ ಸಲ್ಲಿಸಿರುವುದು ಸ್ತುತ್ಯಾರ್ಹ. ಒಂದು ದೇಶ, ಒಂದು ಭಾಷೆ, ಒಂದು ಖಾತೆ, ಒಂದೇ ಭಾರತ ಎಂದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಿಲುವು ದೇಶಕ್ಕೆ ಮಾರಕ. ಒಕ್ಕೂಟ ವ್ಯವಸ್ಥೆಯಲ್ಲಿ ಸಂಸ್ಕೃತಿ, ನೆಲೆ ಪದ್ಧತಿ ಮೊಟಕುಗೊಳಿಸುವ ದುರುದ್ದೇಶ ನಡೆಸಿದೆ ಎಂದು ಅಸಮಧಾನ ಹೊರಹಾಕಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮನೋಜಕುಮಾರ ಪಾಟೀಲ, ರಾಚಪ್ಪ ಹಡಪದ ಸಮಾಜವಾದಿ ಹೋರಾಟಗಾರರ ಸಂಪರ್ಕದ ಕೊಂಡಿಯಾಗಿ ಕಾರ್ಯ ಮಾಡಿ ಹೋರಾಟಕ್ಕೆ ಶಕ್ತಿ ತಂದುಕೊಟ್ಟರು. ತುರ್ತು ಪರಿಸ್ಥಿತಿಯಲ್ಲಿ ಜೈಲು ಅನುಭವಿಸಿದರು. ತಾನು ನಂಬಿದ ಸಿದ್ಧಾಂತ ಬಿಡದೇ ಜೀವನ ಸಾಗಿಸಿ ಸಮಾಜಕ್ಕೆ ಮಾದರಿಯಾಗಿ ಬದುಕಿ ಹೋದರು ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ರವಿರಾಜ ಹಡಪದ, ಹರ್ಷ ಡಂಬಳ, ಮಹಾಂತೇಶ ಅಂಗಡಿ, ಸಿದ್ದಣ್ಣ ಕಮ್ಮಾರ, ಯಕ್ಕೇರಪ್ಪ ನಡುವಿನಮನಿ, ಆರ್.ಎಸ್. ಪಾಟೀಲ, ಎಂ.ಬಿ.ಕಟ್ಟಿ, ಶ್ರೀಶೈಲಗೌಡ ಕಮತರ, ಇತರರು ಇದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.