ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
-ವರ್ಷ ಪೂರ್ತಿ ಉತ್ತಿಬಿತ್ತಿ ಬೆಳೆದ ರಾಗಿ ಸಲಿಗೆ ಸರಿಯಾದ ಬೆಲೆ ಸಿಗದೇ ಮಧ್ಯವರ್ತಿ, ವ್ಯಾಪಾರಿಗಳ ಪಾಲಾಗುತ್ತಿದ್ದು, ರೈತರ ಬೆವರಿಗೆ ಬೆಲೆ ಇಲ್ಲದಂತಾಗಿದೆ.
ಹೌದು! ಮಳೆಯಾಶ್ರಿತ ಬೆಳೆಯಾಗಿ ತಾಲೂಕಿನ ಬಹುತೇಕ ರೈತರು ರಾಗಿ ಬೆಳೆಯುತ್ತಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಿ ಸಲು ಉತ್ತಮವಾಗಿದ್ದರೂ ರಾಗಿ ಮಾರಾಟದಲ್ಲಿ
ಲಾಭ ಮಾತ್ರ ಮಧ್ಯವರ್ತಿ, ವ್ಯಾಪಾರಿಗಳ ಪಾಲಾಗುತ್ತಿದೆ. ಸರ್ಕಾರ ರಾಗಿ ಖರೀದಿ ಕೇಂದ್ರ ಪ್ರಾರಂಭಿಸಿ ಪ್ರತಿ ಕ್ವಿಂಟಾಲ್ಗೆ 4,290 ರೂಪಾಯಿ ನಿಗದಿಪಡಿಸಿದೆಯಾದರೂ ಇದರ ಪ್ರತಿಫಲ ಕೆಲವೇ ಕೆಲವು ರೈತರಿಗೆ ದಕ್ಕುತ್ತಿದೆ. ರಾಗಿ ಖರೀದಿ ಕೇಂದ್ರ ಆರಂಭಿಸುವಲ್ಲಿ ವಿಳಂಬ ಹಾಗೂ ಅಕಾಲಿಕ ಮಳೆಯಿಂದಾಗಿ ನಷ್ಟ ಸಂಭವ ಭಯದಲ್ಲಿ ಬಹುತೇಕ ರೈತರು ರಾಗಿಯನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದು, ಈಗ ಬೆಂಬಲ ಬೆಲೆ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಸರ್ಕಾರ ತಾಲೂಕಿನಲ್ಲಿರುವ ಎರಡು ಎಪಿಎಂಸಿಗಳಲ್ಲಿ ರಾಗಿ ಖರೀದಿ ಕೇಂದ್ರ ತೆರೆದಿದ್ದು, ಪಟ್ಟಣದ ಕೃಷಿ ಉತ್ಪನ್ನ ಉಪಮಾರುಕಟ್ಟೆ ಹಾಗೂ ಹುಳಿಯಾರಿನಲ್ಲಿ ಡಿ.1ರಿಂದ ಬಯೋಮೆಟ್ರಿಕ್ ಮೂಲಕ ನೋಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ನಂತೆ 20 ಕ್ವಿಂಟಾಲ್ ಮೀರದಂತೆ ರಾಗಿ ಖರೀದಿ ಮಾಡಲು ಸರ್ಕಾರ ಆದೇಶಿಸಿದೆ. ಆದರೆ ಒಬ್ಬ ರೈತರು ಎಕರೆಗೆ 10 ಕ್ವಿಂಟಾಲ್ಗಿಂತ ಹೆಚ್ಚು ಬೆಳೆಯುವವರು ಇದ್ದಾರೆ. ಸರ್ಕಾರ 20 ಕ್ವಿಂಟಾಲ್ಗೆ
ಸೀಮಿತ ಮಾಡಿರುವುದು ಸಮಸ್ಯೆಯಾಗಿದೆ. ಕೆಲವು ರೈತರು ತುರ್ತು ಹಣಕ್ಕಾಗಿ ಬೆಂಬಲ ಬೆಲೆಯನ್ನು ನಂಬಿಕೊಳ್ಳದೇ ಸ್ಥಳಿಯ ವ್ಯಾಪಾರಸ್ಥರಿಗೆ 3 ರಿಂದ 4 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.
ರಾಗಿ ನೋಂದಣಿಗೆ ಡಿ.1ರಿಂದ ಅವಕಾಶ ನೀಡಿ 4,290 ರೂಪಾಯಿ ಬೆಂಬಲ ಬೆಲೆ ನಿಗದಿಸಿ ಜ.1ರಿಂದ ಖರೀದಿ ಪ್ರಾರಂಭಿಸಿ ಮಾ.31ಕ್ಕೆ ಅಂತ್ಯಗೊಳಿಸುವುದಾಗಿ ಆದೇಶಿದೆ. ರೈತರು ್ರೂಟ್ಸ್ ಐಡಿ, ಆಧಾರ್ ಸಂಖ್ಯೆ ನೀಡಿ ನೋಂದಣೆ ಮಾಡಬಹುದು. ಆದರೆ, ರೈತರು ನೋಂದಣಿ ಮಾಡಲು ಹೆಚ್ಚಿನ ಸಮಯದ ಜತೆಗೆ ಉತ್ತಮ ಬೆಲೆ ನಿಗದಿ ಮಾಡಿ ಮುಂಚಿತವಾಗಿಯೇ ತಿಳಿಸಬೇಕು. ರೈತರಿಂದ ರಾಗಿ ಖರೀದಿಸಿ ಸ್ಥಳದಲ್ಲೇ ಹಣ ಖಾತೆಗೆ ಹಾಕಲು ಕ್ರಮ ಕೈಗೊಂಡರೆ ರೈತರಿಗೆ ಅನುಕೂಲವಾಗಲಿದೆ ಎಂಬುದು ಅಳಲಾಗಿದೆ.
ನೋಂದಣಿ ಮಾಹಿತಿ: ಚಿಕ್ಕನಾಯಕನಹಳ್ಳಿ ಉಪ ಮಾರುಕಟ್ಟೆಯಲ್ಲಿ ಇದುವರೆಗೆ ಒಟ್ಟು 4,996 ರೈತರು ನೋಂದಣಿ ಮಾಡಿದ್ದು, ಒಟ್ಟು 77,161 ಕ್ವಿಂಟಾಲ್ ರಾಗಿ ಖರೀದಿಗೆ ನೋಂದಣಿಯಾಗಿದೆ. ಹುಳಿಯಾರಿನ ಮಾರುಕಟ್ಟೆಯಲ್ಲಿ 5,863 ರೈತರ ಒಟ್ಟು 92,112 ಕ್ವಿಂಟಾಲ್ಗೆ ನೋಂದಣಿ ಮಾಡಿಸಿದ್ದಾರೆ. ಅನೇಕ ರೈತರು ದಾಖಲೆ ಸಮಸ್ಯೆ ಹಾಗೂ ಪೌತಿ ಖಾತೆ ಮಾಡಿಸದೆ ಇರುವುದು ಸೇರಿ ಹಲವಾರು ಸಮಸ್ಯೆಗಳಿಂದ ನೋಂದಣಿ ಸಾಧ್ಯವಾಗಿಲ್ಲ. ಇದರೊಂದಿಗೆ ಭೂಮಿ ಇಲ್ಲದ ರೈತ ಕಾರ್ಮಿಕರು ಸಹ ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡಿ ರಾಗಿ ಬೆಳೆದಿದ್ದು, ಅವರಿಗೆ ರಾಗಿ ಮಾರಾಟ ಮಾಡುವ ಅವಕಾಶ ಇಲ್ಲದಂತಾಗಿದೆ. ಇಂತಹವರಿಗೂ ಮಾರಾಟ ಮಾಡಲು ಇಲಾಖೆ ಕ್ರಮ ಕೈಗೊಳ್ಳಬೇಕಿದೆ.
ಬೆಳೆ ವಿವರ: ತಾಲೂಕಿನ ಕಸಬಾ ಹೋಬಳಿಯಲ್ಲಿ ಈ ವರ್ಷ 3850 ಹೇಕ್ಟರ್, ಶೆಟ್ಟಿಕೆರೆ 4660 ಹೇ, ಕಂದಿಕೆರೆ 5220 ಹೇ, ಹಂದನಕೆರೆ 8750 ಹೇ, ಹುಳಿಯಾರು ಹೋಬಳಿಯಲ್ಲಿ 9020 ಹೇಕ್ಟರ್ನಂತೆ ಬಿತ್ತನೆಯಾಗಿದ್ದು, 2024&-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಗಿ ಬಿತ್ತನೆಯು ಗುರಿಯು 26,990 ಹೇಕ್ಟರ್ ಇದ್ದು, ಆದರೆ 31500 ಹೇಕ್ಟರ್ ಬಿತ್ತನೆಯಾಗಿದೆ. ಇಳುವರಿಯು ಈ ಹಿಂದಿನ ಹತ್ತು ವರ್ಷಗಳ ಅಂದಾಜಿನಂತೆಯಾದರೆ ಎಕರೆಗೆ 5.5 ಕ್ವಿಂಟಾಲ್ ಇದ್ದು, ಈ ವರ್ಷದಲ್ಲಿ ಎಕರೆಗೆ 8, 10, 14 ಕ್ವಿಂಟಾಲ್ವರೆಗೆ ಬೆಳೆದ ರೈತರಿದ್ದಾರೆ.
ನಮ್ಮ ಭಾಗದಲ್ಲಿ ಹೆಚ್ಚು ರಾಗಿ ಬೆಳೆಗಾರರಿದ್ದು, ಕ್ವಿಂಟಾಲ್ ಸರ್ಕಾರ 4,290 ರೂ. ಬೆಂಬಲ ಬೆಲೆ ನೀಡಿದೆ. ಒಂದು ಎಕರೆಗೆ 10 ಕ್ವಿಂಟಾಲ್ನಂತೆ ಎರಡು ಎಕರೆಗೆ 20 ಕ್ವಿಂಟಾಲ್ ಮಾರಟ ಮಾಡಬಹುದಾಗಿದೆ. ರೈತರು ಸರಿಯಾದ ದಾಖಲೆ ನೀಡಿ ರಾಗಿ ಮಾರಾಟದ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು.
| ಸಿ.ಬಿ.ಸುರೇಶ್ಬಾಬು ಶಾಸಕ
ಈ ವರ್ಷದಲ್ಲಿ ಗುರಿಗಿಂತ ಹೆಚ್ಚಾಗಿ ರಾಗಿ ಬಿತ್ತನೆಯಾಗಿದೆ. ಪ್ರಕೃತಿಯು ಸಹಕರಿಸಿದ ಕಾರಣ ಉತ್ತಮ ಬೆಳೆ ಬಂದಿದೆ. ರೈತರು ಮಧ್ಯವರ್ತಿಗಳ ವ್ಯಾಪಾರಿಗಳ ಹಾವಳಿಗೆ ರಾಗಿ ಮಾರಾಟ ಮಾಡದೇ ನೆಡ್ ಮೂಲಕ ಮಾರಾಟ ಮಾಡಿ.
| ಶಿವರಾಜ್ಕುಮಾರ್ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ
ಐದಾರು ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಉಳುಮೆ ಮಾಡಿ ಐವತ್ತರಿಂದ ಅರವತ್ತು ಚೀಲ ರಾಗಿ ಬೆಳೆದಿದ್ದೇನೆ. ಆದರೆ ನಮಗೆ 16 ಗುಂಟೆ ಇದ್ದು, ಅದು ನಾಲ್ಕು ಗುಂಟೆಗೆ ಒಂದು ಕ್ವಿಂಟಾಲ್ನಂತೆ ಗುರಿ ನಿಗದಿ ಮಾಡಿದ ಕಾರಣ 4 ಕ್ವಿಂಟಾಲ್ ಮಾರಾಟ ಮಾಡಬಹುದು. 3 ಕ್ವಿಂಟಾಲ್ ಮಾತ್ರ ನೋಂದಣಿಯಾಗಿದೆ. ನಮ್ಮಂತಹ ಬಡವರಿಗಾಗಿ ರಾಗಿ ಮಾರಾಟಕ್ಕೆ ಬೇರೆ ವ್ಯವಸ್ಥೆ ಮಾಡಬೇಕು.
| ಮಂಜಣ್ಣ ರೈತ ಹೆಸರಹಳ್ಳಿ