ಜಿಲ್ಲೆ

ರಾಗಿ ಬೆಳೆಗೆ ಬಂತು ಜೀವ ಕಳೆ, ಕೆರೆ-ಕುಂಟೆಗಳಲ್ಲಿ ಜೀವಸೆಲೆ ರೈತರ ಮೊಗದಲ್ಲಿ ಮಂದಹಾಸ

ಬೆಂಗಳೂರು ಗ್ರಾಮಾಂತರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಹಲವು ಕೆರೆ-ಕೆಂಟೆಗಳು ತುಂಬಿವೆ. ಜಿಲ್ಲೆಯ ಪ್ರಧಾನ ಬೆಳೆಯಾಗಿರುವ ರಾಗಿ ಸಲಿಗೆ ಜೀವಕಳೆ ಬಂದಿದೆ. ಕಳೆದೊಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 91.7 ಮಿ.ಮೀಟರ್ ಮಳೆ ಸುರಿದಿದೆ. ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದಲ್ಲಿ 57.5 ವಾಡಿಕೆ ಮಳೆಯಾಗುತ್ತಿತ್ತು. ಈ ಬಾರಿ 59 ಮಿ.ಮೀಟರ್ ಮಳೆ ಸುರಿದಿದೆ.

ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ವ್ಯಾಪ್ತಿಯ ಗುಂಡಮಗೆರೆ ಕೆರೆ 2 ವರ್ಷದ ಬಳಿಕ ಈ ಬಾರಿ ಭರ್ತಿಯಾಗಿದ್ದು, ಕೋಡಿ ಬೀಳುತ್ತಿದೆ.

ವಿಜಯಪುರದಲ್ಲಿ ಮನೆ ಕುಸಿತ: ವಿಜಯಪುರದಲ್ಲಿ ಹಳೇ ಮನೆಯೊಂದು ಕುಸಿದ ಪ್ರಕರಣ ಹೊರತಾಗಿ ಜಿಲ್ಲೆಯಲ್ಲಿ ಪ್ರಾಣಹಾನಿ ಅಥವಾ ಆಸ್ತಿಹಾನಿಯಾಗಿಲ್ಲ. ಹಳೇ ಮನೆಯಾಗಿದ್ದರಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 3 ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗುತ್ತಿದೆ, ಶುಕ್ರವಾರ ರಾತ್ರಿ ದೇವನಹಳ್ಳಿ ರಸ್ತೆ, ಕೋಲಾರ ರಸ್ತೆ, ಚಿಕ್ಕಬಳ್ಳಾಪುರ ಮುಖ್ಯ ರಸ್ತೆಗಳಲ್ಲದೆ, ಪಟ್ಟಣದೊಳಗಿನ ರಸ್ತೆಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಪಟ್ಟಣದ ಸರ್ಕಾರಿ ಕಿರಿಯ ಕಾಲೇಜಿನ ಆಟದ ಮೈದಾನ ಕೆಸರುಗದ್ದೆಯಾಂತಾಗಿದೆ.

ನಾಗರಕೆರೆ ಭರ್ತಿ: ಇತ್ತೀಚೆಗೆ ನಾಗರಕೆರೆ ಅಭಿವೃದ್ಧಿ ಟ್ರಸ್ಟ್ ವತಿಯಿಂದ ನಾಗರಕೆರೆ ಅಭಿವೃದ್ಧಿಪಡಿಸಲಾಗಿತ್ತು. ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಕೆರೆಯಲ್ಲಿ 20 ಅಡಿಯಷ್ಟು ನೀರು ಸಂಗ್ರಹವಾಗಿದೆ.

ದೇವನಹಳ್ಳಿಯಲ್ಲಿ ಹೆಚ್ಚು ಮಳೆ: ಹೊಸಕೋಟೆ ತಾಲೂಕಿನಲ್ಲಿ ಮೂರು ದಿನಗಳಲ್ಲಿ 18.8 ಮಿ.ಮೀ ಮಳೆ ಸುರಿದಿದೆ. ನಂತರ ಸ್ಥಾನದಲ್ಲಿ ದೇವನಹಳ್ಳಿಯಿದ್ದು 98.4 ಮಿ.ಮೀ ಮಳೆಯಾಗಿದೆ, ನೆಲಮಂಗಲದಲ್ಲಿ 83.3 ಮಿಮೀ, ಹಾಗೆಯೇ ದೊಡ್ಡಬಳ್ಳಾಪುರದಲ್ಲಿ 60.2 ಮಿಮೀ ಮಳೆ ದಾಖಲಾಗಿದೆ.

ವಾರದಿಂದ ಮಳೆ: ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿದೆ, ಕೆಲವು ಕಡೆಗಳಲ್ಲಿ ಜೋರು ಮಳೆ ಸುರಿದರೆ ಮತ್ತೆ ಕೆಲವು ಕಡೆಗಳಲ್ಲಿ ತುಂತುರು ಮಳೆಯಾಗಿದೆ, ಕಳೆದೆರಡು ದಿನಗಳಿಂದ ಇಡೀ ದಿನ ಮೋಡಕವಿದ ವಾತಾವರಣವಿದ್ದು ತಡರಾತ್ರಿಯಲ್ಲಿ ಜೋರು ಮಳೆಯಾಗುತ್ತಿದೆ. ನಗರಪ್ರದೇಶಗಳಲ್ಲಿ ಚರಂಡಿಗಳಲ್ಲಿನ ನೀರು ಉಕ್ಕಿ ರಸ್ತೆಗೆ ಹರಿಯುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಉಕ್ಕಿ ಹರಿದ ರಾಜಕಾಲುವೆ: ಹೊಸಕೋಟೆ ನಗರಸಭೆ 28ನೇ ವಾರ್ಡ್‌ನ ಕುವೆಂಪುನಗರ ಮೊದಲನೇ ಮುಖ್ಯರಸ್ತೆ ರಾಜಕಾಲುವೆ ನೀರು ಉಕ್ಕಿಹರಿದು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನೀರು ಹೊರಹಾಕಲು ಸ್ಥಳೀಯರು ಹರಸಾಹಸ ಪಟ್ಟರು. ಪ್ರತಿ ಮಳೆಗಾಲದಲ್ಲೂ ರಾಜಕಾಲುವೆಯಲ್ಲಿ ನೀರು ಉಕ್ಕಿ ಮನೆಗಳಿಗೆ ನುಗ್ಗುತ್ತವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.