ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
ಅಷ್ಟೋ ಇಷ್ಟೋ ಬಿದ್ದ ಮಳೆಗೆ ಭೂಮಿ ಉಳುಮೆ ಮಾಡಿ ಕಷ್ಟಪಟ್ಟು ರಾಗಿ ಬೆಳೆದಿರುವ ಬೆಳೆಗಾರರು ಕನಿಷ್ಠ ಬೆಂಬಲ ಬೆಲೆ ಸಿಗುವುದೆಂಬ ಆಸೆಯಿಂದ ಖರೀದಿ ಕೇಂದ್ರದಲ್ಲಿ ದಿನಗಟ್ಟಲೆ ಸರತಿಯಲ್ಲಿ ನಿಂತು ನೋಂದಾಯಿಸಿಕೊಂಡಿದ್ದರು. ಆದರೆ, ಸರ್ಕಾರ ಖರೀದಿ ಕೇಂದ್ರ ತೆರೆಯದಿರುವುದು ರೈತರನ್ನು ಚಾತಕ ಪಯಂತೆ ಎದುರು ನೋಡುವಂತಾಗಿದೆ.
ಕಳೆದ ವರ್ಷ ಮಳೆ ಇಲ್ಲದೆಯೂ ಬೆಳೆ ಕೈ ಕೊಟ್ಟಿದ್ದರಿಂದ ಈ ವರ್ಷ ಸಾಲ ಮಾಡಿ, ಬಿತ್ತನೆ ಬೀಜ, ಗೊಬ್ಬರ, ಉಳುಮೆ, ಕಟಾವು ಹೀಗೆ ಲಾಂತರ ರೂ. ವೆಚ್ಚ ಮಾಡಿ ರೈತರು ರಾಗಿ ಬೆಳೆದಿದ್ದಾರೆ. ಜ.1ರಂದು ನಫೆಡ್ ಸಂಕ್ರಾಂತಿ ಒಳಗೆ ರಾಗಿ ಖರೀದಿಸಿ ರೈತರ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಹಾಕುತ್ತೆ ಎಂದು ನಿರೀಕ್ಷಿಸಿದ್ದರು. ಆದರೆ, ಸಂಕ್ರಾಂತಿ ಕಳೆದು ಶಿವರಾತ್ರಿ ಮುಗಿದರೂ ಖರೀದಿ ಬಗ್ಗೆ ಸರ್ಕಾರ ಸ್ಪಷ್ಟ
ಮಾಹಿತಿ ನೀಡದ ಕಾರಣ ಇನ್ನಷ್ಟು ದಿನ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಖರೀದಿ ಕೇಂದ್ರದಲ್ಲಿ ನೋಂದಾಯಿಸಿ ಕೊಂಡಿರುವ ರೈತರು ಇತ್ತ ಖಾಸಗಿಯವರಿಗೂ ಮಾರಾಟ ಮಾಡಲಾಗದೆ, ಅರ್ಥಿಕ ಸಂಕಷ್ಟದಲ್ಲಿ ತೊಳಲಾಡುತ್ತಿದ್ದಾರೆ. ಬೆಳೆ ಇದ್ದರೂ ಮಾರಾಟ ಮಾಡಲಾಗದೆ ಹಬ್ಬಗಳ ಖರ್ಚು ಸೇರಿ ಜಾತ್ರೆ, ಮದುವೆಗಳಿಗೆ ಹಾಗೂ ಹೊಲಗಳಿಗೆ ಗೊಬ್ಬರ, ಮಣ್ಣು ತುಂಬಲು ಸಾಲ ಮಾಡುವಂತಹ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ.
ಡಿಸಿ ಮಾಹಿತಿ: ಹುಳಿಯಾರು ಎಪಿಎಂಸಿ ಬಳಿ ರಾಗಿ ಖರೀದಿ ಆರಂಭಿಸುವಂತೆ ಮತ್ತು ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ರೈತರು ತಿಳಿಸಿದಾಗ, ಈ ವರೆಗೆ ಖಾಲಿ ಚೀಲದ ಸಮಸ್ಯೆಯಿತ್ತು. ಈಗ ಖಾಲಿ ಚೀಲ ಬಂದಿದ್ದು, ಸರ್ಕಾರದ ಗಮನಕ್ಕೆ ತಂದು ಖರೀದಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಿಸುವುದಾಗಿ ಡಿಸಿ ಮಾಹಿತಿ ನೀಡಿದ್ದಾರೆ.
ವರ್ತಕರಿಗೆ ಮಾರಾಟ: ಖರೀದಿ ಪ್ರಕ್ರಿಯೆ ದಿನಗಳೆದಂತೆ ನಿಧಾನವಾಗುತ್ತಿರುವುದರಿಂದ ಸಣ್ಣ ರೈತರು ಜೀವನ ನಿರ್ವಹಣೆಗೆ ವರ್ತಕರಿಗೆ ಕಡಿಮೆ ಬೆಲೆಗೆ ರಾಗಿ ಮಾರಲು ಆರಂಭಿಸಿದ್ದಾರೆ. ಇದೇ ರಾಗಿಯನ್ನು ವರ್ತಕರು ಹೆಚ್ಚು ಬೆಲೆಗೆ ನಫೆಡ್ಗೆ ಮಾರುವ ವಾಮಮಾರ್ಗದ ಜಾಲವೂ ಚಾಲ್ತಿಯಲ್ಲಿದೆ. ಹಾಗಾಗಿ ರಾಗಿ ಖರೀದಿ ತಡವಾದಷ್ಟು ರೈತರಿಗಿಂತ ವರ್ತಕರಿಗೆ ಬೆಂಬಲ ಬೆಲೆಯ ಲಾಭವಾಗುವ ಸಾಧ್ಯತೆ ಇದೆ. ಸರ್ಕಾರ ಸಹ ನಫೆಡ್ ಮೂಲಕ ರಾಗಿ ಖರೀದಿಗೆ ಹಿಂದೇಟು ಹಾಕುತ್ತಿರುವುದು ವರ್ತಕರಿಗೆ ವರವಾಗಿದೆ.
ಚಿಕ್ಕನಾಯಕನಹಳ್ಳಿಯಲ್ಲಿ 12,145 ರೈತರಿಂದ ನೋಂದಣಿ: ತಾಲೂಕಿನ ಹುಳಿಯಾರು ಮಾರುಕಟ್ಟೆಯಲ್ಲಿ ಒಟ್ಟು 6,567 ರೈತರು ಒಟ್ಟು 1,02,489 ಕ್ವಿಂಟಾಲ್ ಹಾಗೂ ಚಿಕ್ಕನಾಯಕನಹಳ್ಳಿ ಉಪಕೃಷಿ ಮಾರುಕಟ್ಟೆಯಲ್ಲಿ 5,578 ರೈತರು ಒಟ್ಟು 85,28,850 ಕ್ವಿಂಟಾಲ್ಗೆ ನೋಂದಣಿಯಾಗಿದ್ದು, ಒಟ್ಟು ತಾಲೂಕಿನಲ್ಲಿ 12,145 ರೈತರು ನೋಂದಣಿ ಮಾಡಿಸಿದ್ದು, ಒಟ್ಟು 18,77,775 ಕ್ವಿಂಟಾಲ್ ರಾಗಿ ಖರೀದಿ ಮಾಡಬೇಕಿದೆ. ಈ ಬಗ್ಗೆ ಜ.12ರಂದು "ವಿಜಯವಾಣಿ' ಬೆಳಕು ಚೆಲ್ಲಿತ್ತು. ಆದರೂ ಇದುವರೆಗೆ ಖರೀದಿ ಬಗ್ಗೆ ಗಮನಹರಿಸಿಲ್ಲ.
ಎರಡು ಕೇಂದ್ರದಲ್ಲಿ ಪ್ರಕ್ರಿಯೆ: ತಾಲೂಕಿನಲ್ಲಿ ಎರಡು ಎಪಿಎಂಸಿಗಳಿದ್ದು, ತಾಲೂಕಿನಲ್ಲಿ ಹೆಚ್ಚು ರಾಗಿ ಬೆಳೆಗಾರರಿದ್ದಾರೆ. ಈ ವರ್ಷದಲ್ಲಿ ಹೆಚ್ಚು ರಾಗಿ ಬೆಳೆದಿದ್ದು, ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿಖರೀದಿ ಮಾಡುವುದಾಗಿ ಮೂರು ತಿಂಗಳಿಂದ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಚಿಕ್ಕನಾಯಕನಹಳ್ಳಿಯ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನೋಂದಣಿ ಮಾಡಲಾಗಿತ್ತು. ನೋಂದಾಯಿತ ರೈತರು ಸರ್ಕಾರ ಯಾವಾಗ ರಾಗಿ ಖರೀದಿ ಮಾಡುವುದೋ, ಹಣ ಯಾವಾಗ ಕೈ ಸೇರುತ್ತದೆಯೋ ಎಂದು ಕಾಯುವಂತಾಗಿದೆ.
ಎಂಟು ಎಕರೆ ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಪಡೆದು ಉಳುಮೆ ಮಾಡಿ 60 ಕ್ವಿಂಟಾಲ್ ರಾಗಿ ಬೆಳೆದಿದ್ದು, ಅದನ್ನು ಬೆಂಬಲ ಬೆಲೆಗೆ ಮಾರಿ ಅದರಿಂದ ಬಂದ ಹಣವನ್ನು ಮುಂದಿನ ಕೃಷಿ ಚಟುವಟಿಕೆಗೆ, ಗೊಬ್ಬರ, ಬಿತ್ತನೆ ಬೀಜ ಖರೀದಿ ಸೇರಿದಂತೆ ಇತರ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ಚಿಂತಿಸುತ್ತಿದ್ದೆವು. ಆದರೆ ಸರ್ಕಾರ ಇನ್ನೂ ರಾಗಿ ಖರೀದಿ ಮಾಡದೇ ನಮಗೆ ಸಮಸ್ಯೆಯಾಗಿದೆ. ಸರ್ಕಾರದ ನಡೆ ಬೇಸರ ಮೂಡಿಸಿದೆ.| ಬಾಲ್ಯನಾಯ್ಕ ರೈತ ಆಲದಕಟ್ಟೆ ತಾಂಡಾಕಳೆದ ವರ್ಷ ಸೆಪ್ಟಂಬರ್ನಲ್ಲಿ ಮಳೆ ಕೈಕೊಟ್ಟಿದ್ದು, ರಾಗಿ ಇಳುವರಿಯಲ್ಲಿ ಶೇ.50 ಕುಸಿದಿದೆ. ಆದರೆ, ಜನಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮಳೆ ಚೆನ್ನಾಗಿ ಆಗಿದೆ. ತಾಲೂಕಿನಲ್ಲಿ ನಿರೀಕ್ಷೆಗಿಂತ ಅಧಿಕ ಇಳುವರಿ ಬಂದಿದೆ ಎಂದು ಹೇಳಿಕೆ ನೀಡಿ ಬೆಳೆ ವಿಮೆಯಿಂದಲೂ ರೈತರನ್ನು ವಂಚಿಸಲು ಪ್ರಯತ್ನಿಸಿದ್ದಾರೆ. ಅಳಿದುಳಿದ ರಾಗಿಯನ್ನು ಒಕ್ಕಲು ಮಾಡಿ ಸಂಗ್ರಹಿಸಿಟ್ಟಿದ್ದು, ಖರೀದಿ ಕೇಂದ್ರ ತೆರೆದಿಲ್ಲ. ಚುನಾವಣಾಪೂರ್ವ ಇರುವಂತಹ ಜನಪರ ಕಾಳಜಿ ನಂತರ ಕಾಣೆಯಾಗಿರುವುದು ತಾಲೂಕಿನ ರೈತರ ದುರದೃಷ್ಟವಾಗಿದೆ. ರೈತರ ಹಿತ ಕಾಪಾಡಲು ಶ್ರೀ ರಾಗಿ ಖರೀದಿ ಆರಂಭಿಸಬೇಕು.| ಆಲದಕಟ್ಟೆ ತಿಮ್ಮಯ್ಯ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ