ಜಿಲ್ಲೆ

ರಾಗಿ ಖರೀದಿಗೆ ಇನ್ನೂ ಆರಂಭವಾಗದ ನೋಂದಣಿ

ಚಿತ್ರದುರ್ಗ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಖರೀದಿಗೆ ಜಿಲ್ಲೆಯಲ್ಲಿ ಡಿ.1ರಿಂದ ಆರಂಭವಾಗಬೇಕಿ ದ್ದ ನೋಂದಣಿಗೆ ಇನ್ನೂ ಚಾಲನೆ ಸಿಕ್ಕಿಲ್ಲ.

ಡಿ.1ರಿಂದ 31ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದರು. ಪ್ರತಿ ಕ್ವಿಂಟಾಲ್ ರಾಗಿಗೆ 4290 ರೂ.ದರ ನಿಗದಿಯಾಗಿದ್ದು, 2025 ಜನವರಿ 1ರಿಂದ ಮಾರ್ಚ್ 31ರವರೆಗೆ ಖರೀದಿಸಲಾಗುತ್ತದೆ.

ಇದಕ್ಕಾಗಿ ಸರ್ಕಾರ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದೆ. ಆದರೆ, ನೋಂದಣಿ ಪ್ರಕ್ರಿಯೆಗೆ ನಿಗಮ ಈವರೆಗೂ ಅಧಿಕಾರಿ, ಸಿಬ್ಬಂದಿ ನಿಯೋಜಿಸಿಲ್ಲ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನೋಂದಣಿ ಆರಂಭವಾಗಬೇಕಿದೆ. ಹೀಗಾಗಿ ನೋಂದಣಿಗೆ ಇನ್ನು ಒಂದು ವಾರ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ನೋಂದಣಿ ಆರಂಭವಾಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ನಿಗಮದ ಅಧಿಕಾರಿ, ಏನಾಗಿದೆ ಎಂಬುದನ್ನು ವಿಚಾರಿಸಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಂದಾಜು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಹೊಸದುರ್ಗ, ಹೊಳಲ್ಕೆರೆ, ಚಿತ್ರದುರ್ಗ ತಾಲೂಕಗಳಲ್ಲಿ ಅಧಿಕ ಬಿತ್ತನೆಯಾಗಿದ್ದು, ಅಂದಾಜು 87 ಸಾವಿರ ಮೆಟ್ರಿಕ್ ಟನ್ ಇಳುವರಿ ನಿರೀಕ್ಷಿಸಲಾಗಿದೆ. ರೈತರಿಂದ ನೇರವಾಗಿ ಖರೀದಿಸಲು ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಶ್ರೀರಾಂಪುರ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ.

ಹೆಚ್ಚಿನ ಬೇಡಿಕೆ ಎದುರಾದರೆ ಹಿರಿಯೂರು ಹಾಗೂ ಹೊಸದುರ್ಗದಲ್ಲಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ನಿರ್ಧರಿಸಿತ್ತು.

2022-23ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್‌ಗೆ 3578 ರೂ. ಗಳಂತೆ 21,715 ಮೆಟ್ರಿಕ್ ಟನ್, 2023-24ನೇ ಸಾಲಿನಲ್ಲಿ 3846 ರೂ.ಗಳಂತೆ 1832 ಮೆಟ್ರಿಕ್ ಟನ್ ರಾಗಿ ಖರೀದಿಸಲಾಗಿತ್ತು.