ಜಿಲ್ಲೆ

ರಾಗಿ ಕಟಾವಿಗೆ ಏಜೆಂಟರ ಕಾಟ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಚಿಕ್ಕರಾಜು ದಾಬಸ್‌ಪೇಟೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟದ ಆತಂಕದಲ್ಲಿರುವ ರೈತರಿಗೆ ಈಗ ಮಧ್ಯವರ್ತಿಗಳ ಕಾಟ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಗಿ ಕಟಾವು ಯಂತ್ರಗಳ ಬಳಕೆಯಲ್ಲಿ ಮೂಗು ತೂರಿಸುತ್ತಿರುವ ಮಧ್ಯವರ್ತಿಗಳು ರಾಗಿ ಬೆಳೆಗಾರರನ್ನು ಕಾಡುತ್ತಿದ್ದಾರೆ. ಹೌದು... ನೆಲಮಂಗಲ ತಾಲೂಕು ಸೋಂಪುರ ಹೋಬಳಿಯಲ್ಲಿ ರಾಗಿ ಕಟಾವಿಗೆ ರೈತರು ಪರದಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ, ಕೂಲಿ ಕಾರ್ಮಿಕರ ಕೊರತೆ, ದುಬಾರಿ ಕೂಲಿಗೆ ಹೆದರಿದ ಬೆಳೆಗಾರರು ರಾಗಿ ಕಟಾವು ಯಂತ್ರದ ಮೂಲಕ ರಾಗಿ ಒಕ್ಕಣೆಗೆ ಮುಂದಾಗಿದ್ದಾರೆ. ತಾಲೂಕಿನ ಉದ್ದಕ್ಕೂ ಕೈಗಾರೀಕರಣದ ಪ್ರಭಾವದಿಂದ ಕೃಷಿ ಕೂಲಿಕಾರ್ಮಿಕರ ಕೊರತೆ ಎದುರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಯಂತ್ರಗಳ ಮಾಲೀಕರು ಹಾಗೂ ಮಧ್ಯವರ್ತಿಗಳು ರಾಗಿ ಬೆಳೆಗಾರರನ್ನು ಸುಲಿಗೆ ಮಾಡಲು ತೊಡಗಿದ್ದಾರೆ. ಜಿಲ್ಲಾಡಳಿತ ಎಕರೆವಾರು ಕಟಾವಿಗೆ ಮೊತ್ತ ನಿಗದಿಸಿದ್ದರೂ ನಿಯಮ ಗಾಳಿಗೆ ತೂರಿ ಹೆಚ್ಚು ಮೊತ್ತ ವಸೂಲಿ ಮಾಡಲಾಗುತ್ತದೆ. ಸೈಕ್ಲೋನ್ ಭಯ: ಈ ಬಾರಿ ನೆಲಮಂಗಲ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಫಸಲು ಚೆನ್ನಾಗಿ ಬಂದಿದೆ. ಇತ್ತೀಚೆಗೆ ೆಂಗಲ್ ಚಂಡಮಾರುತ ರಾಗಿ ಕಟಾವಿಗೆ ಅಡ್ಡಿಯಾಗಿತ್ತು. ಅದಾದ ನಂತರ ಬಿಸಿಲು ಬಂದ ಮೇಲೆ ರೈತರು ರಾಗಿ ಕೊಯ್ಲಿಗೆ ಮುಂದಾಗಿದ್ದಾರೆ. ಆಗಾಗ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿರುವ ಹಿನ್ನೆಲೆಯಿಂದಾಗಿ ಮತ್ತೆ ಮಳೆ ಬಂದೀತು ಎಂಬ ಭಯದಿಂದಾಗಿ ಕಟಾವು ಮಾಡಿಸಲು ನಾ ಮುಂದು ತಾ ಮುಂದು ಎಂಬಂತೆ ರೈತರು ರಾಗಿ ಕಟಾವಿಗೆ ಮುಂದಾಗಿದ್ದಾರೆ. ಇದನ್ನೇ ನೆಪಮಾಡಿಕೊಂಡಿರುವ ಯಂತ್ರಗಳ ಮಾಲೀಕರು ಹೆಚ್ಚಿನ ಮೊತ್ತದ ಬೇಡಿಕೆ ಇಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಭಾಷೆ ಸಮಸ್ಯೆ: ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಉತ್ತರ ಭಾರತದಿಂದ ಬಂದಿರುವ ಯಂತ್ರಗಳ ಚಾಲಕರಿಗೆ ಕನ್ನಡ ಭಾಷೆ ಬರುವುದಿಲ್ಲ. ಹೀಗಾಗಿ ಅವರು ಸ್ಥಳೀಯ ಕನ್ನಡ ಮತ್ತು ತಮಿಳು ಮಾತನಾಡುವ ಏಜೆಂಟ್ ನೇಮಿಸಿಕೊಂಡು ಅವರ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಪರಿಸ್ಥಿತಿ ಲಾಭ ಪಡೆಯುತ್ತಿರುವ ಮಧ್ಯವರ್ತಿಗಳು ರೈತರಿಂದ ಹೆಚ್ಚಿನ ಹಣ ಪಡೆದು ತಾವೂ ಪಾಲು ಪಡೆಯುತ್ತಿದ್ದಾರೆ. ಜಿಲ್ಲಾಡಳಿತ ರಾಗಿ ಕಟಾವು ಮಾಡಲು ಪ್ರತಿ ಗಂಟೆಗೆ ದೊಡ್ಡ ಕಟಾವು ಯಂತ್ರಕ್ಕೆ 3,500 ರೂಪಾಯಿ ಹಾಗೂ ಟ್ರ್ಯಾಕ್ಟರ್ ರೂಪದ ಯಂತ್ರಕ್ಕೆ ಗಂಟೆಗೆ 2,700 ರೂಪಾಯಿ ಬಾಡಿಗೆ ನಿಗದಿಪಡಿಸಿದೆ. ಆದರೆ ಇದಕ್ಕಿಂತ ಸಾವಿರಾರು ರೂಪಾಯಿ ಹೆಚ್ಚು ಪಡೆಯುತ್ತಿರುವ ಪ್ರಸಂಗಗಳು ಕಂಡುಬರುತ್ತಿವೆ. ಅವರು ಹೇಳಿದ್ದೇ ಬೆಲೆ: ರಾಗಿ ಕಟಾವು ಯಂತ್ರ ಇರುವ ಜಾಗಕ್ಕೆ ಹತ್ತಾರು ಜನ ದಾಂಗುಡಿ ಇಡುತ್ತಿದ್ದು, ವೇಳೆ ಎದುರಾಗುವ ಮಧ್ಯವರ್ತಿಗಳು ಬೇರೆ ಕಡೆ ತುಂಬಾ ಬೇಡಿಕೆ ಇದೆ. ಇಷ್ಟು ಹಣ ಕೊಟ್ಟರಷ್ಟೆ ಕಟಾವಿಗೆ ಬರುವುದು ಎಂದು ಹೇಳುತ್ತಿದ್ದಾರೆ. ಇದರಿಂದ ಅನಿವಾರ್ಯವಾಗಿ ಕೇಳಿದಷ್ಟು ಹಣ ತೆತ್ತು ರಾಗಿ ಕಟಾವು ಮಾಡುವಂತ ಪರಿಸ್ಥಿತಿ ಎದುರಾಗಿದೆ. ರೈತರಿಗೆ ವಂಚನೆ: ಟ್ರ್ಯಾಕ್ಟರ್ ರೂಪದಲ್ಲಿರುವ ಯಂತ್ರಗಳು ಗಂಟೆ ಲೆಕ್ಕದಲ್ಲಿ ಕೊಯ್ಲು ಮಾಡುತ್ತಿದ್ದು, 1 ಗಂಟೆಯಲ್ಲಿ ಕೊಯ್ಲು ಮಾಡುವುದನ್ನು ಕನಿಷ್ಠ 20 ರಿಂದ 30 ನಿಮಿಷ ಹೆಚ್ಚು ತೆಗೆದುಕೊಳ್ಳುತ್ತಾರೆ. ಇನ್ನು ಬೇಲಾರ್ ಯಂತ್ರಗಳು 1 ಎಕರೆ ಇದ್ದರೆ, ಹತ್ತು- ಹದಿನೈದು ಗುಂಟೆ ಹೆಚ್ಚುವರಿ ಎಂದು ಸುಳ್ಳು ಹೇಳಿ ರೈತರಿಂದ ಹಣ ಪೀಕಿಸುತ್ತಿದ್ದಾರೆ ಎಂಬ ಆರೋಪ ಸಾಮಾನ್ಯವಾಗಿದೆ.

ಇತ್ತೀಚೆಗೆ ವಾಯುಭಾರ ಕುಸಿತದ ಕಾರಣ ರಾಗಿ ಬೆಳೆ ಸಾಕಷ್ಟು ನಷ್ಟವಾಗಿದೆ, ಅಳಿದುಳಿದ ರಾಗಿ ಸಲನ್ನು ಪಡೆಯಲು ಹರಸಾಹಸ ಮಾಡುತ್ತಿದ್ದೇವೆ. ಹಮಾಮಾನ ಇಲಾಖೆ ಮತ್ತೆ ಮಳೆಯಾಗುವ ಸೂಚನೆ ನೀಡಿದ್ದರು ಮತ್ತಷ್ಟು ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಗಿ ಬೆಳೆಗಾರರು ತುರ್ತಾಗಿ ರಾಗಿ ಕಟಾವಿಗೆ ಮುಂದಾಗಿದ್ದಾರೆ. ಪರಿಸ್ಥಿತಿ ಲಾಭ ಪಡೆಯುತ್ತಿರುವ ರಾಗಿ ಕಟಾವು ಯಂತ್ರದ ಮಾಲೀಕರು ಇವರಿಗೆ ಕೈಜೋಡಿಸಿರುವ ಮಧ್ಯವರ್ತಿಗಳು ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಜಗದೀಶ್ ಸೋಂಪುರ ರೈತ ರೈತರಿಂದ ಹೆಚ್ಚಿನ ಬಾಡಿಗೆ ಪಡೆದರೆ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯರೇ ಎಚ್ಚರಿಕೆ ನೀಡಿದರೂ ಮಾಲೀಕರು ಹಾಗೂ ಏಜೆಂಟ್‌ರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತ ಅಧಿಕಾರಿಗಳು ಗಮನ ನೀಡಬೇಕಿದೆ ಮೋಹನ್‌ಕುಮಾರ್ ರೈತ ದಾಬಸ್‌ಪೇಟೆ