ಮೈಸೂರು: ವಿದ್ಯಾರ್ಥಿಗಳ ಕೈಗೆ ಕಟ್ಟಿದ್ದ ರಾಖಿಯನ್ನು ಶಾಲೆಯ ಶಿಕ್ಷಕರು ತೆಗೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಂಟಾಗಿದ್ದ ವಿವಾದ ಶುಕ್ರವಾರ ಬಗೆಹರಿದಿದೆ.
ನಗರದ ದೇವರಾಜ ಮೊಹಲ್ಲಾದಲ್ಲಿರುವ ಖಾಸಗಿ ಶಾಲೆಯಲ್ಲಿ ಕಿರಿಯ ವಿದ್ಯಾರ್ಥಿ ಕೈಯಲ್ಲಿದ್ದ ರಾಖಿಯನ್ನು ಹಿರಿಯ ವಿದ್ಯಾರ್ಥಿ ತೆಗೆದು ಹಾಕಿದ್ದಾರೆ. ಅವರಿಬ್ಬರು ಹಿಂದು ಧರ್ಮೀಯರು ಎನ್ನುವುದು ತಿಳಿದು ಬಂದಿದೆ.
ಶಾಲೆಯ ಶಿಕ್ಷಕರು ಮಕ್ಕಳ ಮೂಲಕ ರಾಖಿ ತೆಗೆಸಿದ್ದಾರೆ ಎಂದು ಕೆಲವು ಪಾಲಕರು ವಿವಾದ ಮಾಡಿದ್ದರು. ಶುಕ್ರವಾರ ಶಾಲೆಗೆ ಹಿಂದು ಪರ ಸಂಘಟನೆಗಳೊಂದಿಗೆ ತೆರಳಿ ಪ್ರತಿಭಟನೆಗೆ ಮುಂದಾಗಿದ್ದರು.
ಸ್ಥಳಕ್ಕೆ ಧಾವಿಸಿದ್ದ ದೇವರಾಜ ಠಾಣೆಯ ಪೊಲೀಸರು, ಪರಿಶೀಲಿಸಿದಾಗ ಮಕ್ಕಳ ಆಟದಿಂದ ಇದು ವಿವಾದದ ಸ್ವರೂಪ ಪಡೆದುಕೊಂಡಿರುವ ವಿಚಾರ ತಿಳಿದು ಬಂದಿದೆ. ಇದಾದ ಬೆನ್ನಲೇ ವಿವಾದ ಅಂತ್ಯ ಕಂಡಿದೆ.