ಮೈಸೂರು: ಕೆ.ಎನ್. ಪುಟ್ಟಬುದ್ಧಿ ಫೌಂಡೇಷನ್, ಡಾ.ಚಂದ್ರಶೇಖರ್ ಮತ್ತು ತಂಡ, ಮಣಿಪಾಲ್ ಆಸ್ಪತ್ರೆ, ಶ್ರೀರಂಗ ಆಯುರ್ವೇದ ಚಿಕಿತ್ಸಾ ಮಂದಿರ, ಮೈಸೂರು ಲಯನ್ಸ್ ಬ್ಲಡ್ ಸೆಂಟರ್ ಜೀವಾಧಾರ, ಮೈಸೂರು ಮೆಡಾಲ್ ಡಯಾಗ್ನಾಸ್ಟಿಕ್ಸ್, ಬಾಲಾಜಿ ಐ ಕೇರ್ ಮತ್ತು ಆಪ್ಟಿಕಲ್ಸ್, ಗ್ರಾಮ ಒನ್ ವರುಣಾದಿಂದ ಮೈಸೂರು ತಾಲೂಕಿನ ರಾಂಪುರದಲ್ಲಿ ಭಾನುವಾರ ಆರೋಗ್ಯ ತಪಾಸಣಾ ಉಚಿತ ಶಿಬಿರ ಆಯೋಜಿಸಲಾಗಿತ್ತು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ಮಕ್ಕಳಿಗೆ ರಕ್ತದ ಗುಂಪಿನ ಪರೀಕ್ಷೆ ಮಾಡಿ ಅದರ ಮಾಹಿತಿ ಇರುವ ಕಾರ್ಡ್ ವಿತರಿಸಲಾಯಿತು. ರಕ್ತದ ಒತ್ತಡ ಮತ್ತು ಸಕ್ಕರೆ ಅಂಶ ಪರೀಕ್ಷೆ, ಕಣ್ಣಿತ ತಪಾಸಣೆ, ಈಸಿಜಿ ಪರೀಕ್ಷೆ, ಸಾಮಾನ್ಯ ಕಾಯಿಲೆಗಳ ತಪಾಸಣೆ, ಔಷಧ ವಿತರಣೆ ಅಲ್ಲದೆ ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಮಾಡಿಕೊಡಲಾಯಿತು.
ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಶರತ್ ಪುಟ್ಟಬುದ್ಧಿ, ಕಿರಾಳು ಮಂಜು, ಕೀಳನಪುರ ನಾಗೇಶ ಇತರರು ಶಿಬಿರದಲ್ಲಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಶರತ್ ಪುಟ್ಟಬುದ್ಧಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಸ್ವಸ್ಥ ಜೀವನ ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಕೆ.ಎನ್.ಪುಟ್ಟಬುದ್ಧಿ ಫೌಂಡೇಷನ್‌ನಿಂದ ಆರೋಗ್ಯ ಮೇಳ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ವರುಣಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್.ಪುಟ್ಟಬುದ್ಧಿ, ವೈದ್ಯರಾದ ಡಾ.ಚಂದ್ರಶೇಖರ್, ಡಾ.ಸದಾನಂದ್, ಪ್ರಮುಖರಾದ ಕೃಷ್ಣ, ರಾಜಶೇಖರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರು, ನಾಗರಾಜು, ಸಿದ್ದರಾಜು, ಮಹದೇವಸ್ವಾಮಿ, ಗೌಡರಹುಂಡಿ ಮಂಜೇಶ್, ಹದಿನಾರು ಗುರುಮಲ್ಲಮ್ಮ ಇತರರು ಇದ್ದರು.