ಜಿಲ್ಲೆ

ರಸ್ತೆಯುದ್ದಕ್ಕೂ ಚದುರಿದೆ ಜಲ್ಲಿ

ಧನಂಜಯ ಗುರುಪುರ
ರಸ್ತೆ ವಿಸ್ತರಣೆಗೊಂಡು ಎಡಪದವಿನಿಂದ ಬಿ.ಸಿ.ರೋಡ್‌ಗೆ ವಾಹನ ಸಂಚಾರ ಸುಗಮವಾಗಲಿದೆ ಎಂದು ವಿಶ್ವಾಸದಲ್ಲಿದ್ದ ಈ ಭಾಗದ ವಾಹನ ಚಾಲಕರು ಮತ್ತು ಸಾರ್ವಜನಿಕರು ಈಗ ಅನೇಕ ಸಮಸ್ಯೆ ಎದುರಿಸುವಂತಾಗಿದೆ.
ಎಡಪದವು ಮೂಲಕ ಕುಪ್ಪೆಪದವು ಮಾರ್ಗವಾಗಿ ಮೂಲರಪಟ್ಣದಿಂದ ಬಿ.ಸಿ.ರೋಡ್‌ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಮೂರು ತಿಂಗಳ ಹಿಂದೆ ರಸ್ತೆ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿಗೆ ಶಾಸಕ ಡಾ.ವೈ.ಭರತ್ ಶೆಟ್ಟಿ ಶಿಲಾನ್ಯಾಸ ಮಾಡಿದ್ದರು. ಕೆಲವೇ ದಿನಗಳಲ್ಲಿ ರಸ್ತೆ ಅಗೆಯುವ ಕೆಲಸ ಆರಂಭಗೊಂಡು, ಪದ್ರೆಂಗಿವರೆಗೆ ಸುಮಾರು ಮೂರೂವರೆ ಕಿ.ಮೀ. ರಸ್ತೆ ಬದಿಯ ಗುಡ್ಡ, ಮರ ಕಡಿದು, ಭೂಮಿ ಅಗೆಯಲಾಗಿದೆ. ಎಡಪದವಿನಿಂದ ಮುಂದಕ್ಕೆ ಕುಂದೋಡಿ, ಬ್ರಹ್ಮನಗರ, ಬ್ರಿಂಡೇಲ್‌ನಲ್ಲಿ ಉದ್ದಕ್ಕೆ ರಸ್ತೆ ಬದಿ ಅಗೆಯಲಾಗಿದ್ದು, ಜಲ್ಲಿಕಲ್ಲು ಚದುರಿಸಲಾಗಿದೆ. ಕೆಲಸ ನಡೆದು ಸುಮಾರು ಮೂರು ತಿಂಗಳು ಕಳೆದಿದೆ. ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ.
ಅಗಲ ಕಿರಿದಾದ ಈ ರಸ್ತೆಯಲ್ಲಿ ಹಾಕಲಾಗಿರುವ ಇಷ್ಟೊಂದು ಪ್ರಮಾಣದ ಜಲ್ಲಿಕಲ್ಲು ಮತ್ತು ಗುಡ್ಡ ಅಗೆತದಿಂದ ಮೂಲದ ರಸ್ತೆ ಇನ್ನಷ್ಟು ಅಗಲ ಕಿರಿದಾಗಿ, ದ್ವಿಚಕ್ರ ವಾಹನಗಳವರು ರಸ್ತೆಯಿಂದ ಹೊಂಡಕ್ಕಿಳಿದು ಇತರ ವಾಹನಗಳಿಗೆ ಸೈಡ್ ನೀಡಬೇಕಾಗುತ್ತದೆ. ರಾತ್ರಿ ವೇಳೆ ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಸ್ತೆ ವಿಸ್ತರಣೆಯಾಗುತ್ತದೆ ಎಂದಾಗ ಸಹಜವಾಗಿಯೇ ಈ ಭಾಗದ ಜನ, ಪ್ರಯಾಣಿಕರು, ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಖುಷಿಯಾಗಿತ್ತು. ಆದರೆ ಈಗ ರಸ್ತೆ ಅವಸ್ಥೆ ಕಂಡಾಗ ದುಃಖವಾಗುತ್ತದೆ. ಮಳೆಯಾದರೆ ಈ ರಸ್ತೆ ಸಮಸ್ಯೆಯ ಆಗರವಾಗಲಿದೆ.
ರಜತ್ ಎಡಪದವು ನಿವಾಸಿ

ಎಡಪದವು-ಬಿ.ಸಿ.ರೋಡ್ ರಾಜ್ಯ ಹೆದ್ದಾರಿ ವಿಸ್ತರಣೆ ಕೆಲಸ ತುರ್ತಾಗಿ ನಡೆಸುವಂತೆ ಸಂಬಂಧಿತ ಇಲಾಖೆ ಇಂಜಿನಿಯರ್‌ಗಳ ಗಮನ ಹರಿಸುವ ನಿಟ್ಟಿನಲ್ಲಿ ಎಡಪದವು ಪಂಚಾಯಿತಿಯಲ್ಲಿ ಈಗಾಗಲೇ ನಿರ್ಣಯ ಕೈಗೊಳ್ಳಲಾಗಿದೆ. ಕೆಲವೆಡೆ ರಸ್ತೆ ಬದಿಗೆ ಹಾಕಲಾದ ಜಲ್ಲಿಕಲ್ಲು ಎಲ್ಲೆಡೆ ಚದುರಿಕೊಂಡಿದೆ. ಇದರಿಂದ ಸಮಸ್ಯೆ ಉಂಟಾಗಿರುವುದು ಸತ್ಯ.
ಗಂಗಾಧರ ಪೂಜಾರಿ ಎಡಪದವು ಪಂಚಾಯಿತಿ ಸದಸ್ಯ

ಈಗಾಗಲೇ ಕೆಲವರು ಎಡಪದವು ರಸ್ತೆ ಅಭಿವೃದ್ಧಿ ಕಾರ್ಯ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಂಬಂಧಿತ ಇಲಾಖೆ ಮತ್ತು ಇಂಜಿನಿಯರ್‌ಗಳನ್ನು ಸಂಪರ್ಕಿಸಿ ಕಾಮಗಾರಿಗೆ ತುರ್ತು ಚಾಲನೆ ನೀಡಲು ಸೂಚಿಸುವೆ.
ಡಾ.ವೈ ಭರತ್ ಶೆಟ್ಟಿ ಶಾಸಕ