ಧಾರವಾಡ: ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಶುಕ್ರವಾರ ಹು-ಧಾ ಮಧ್ಯೆ ರಾಯಾಪುರ ಬಳಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕೃಷಿ ಮಸೂದೆಗಳನ್ನು ಅಂಗೀಕರಿಸುವ ಮೂಲಕ ರೈತರು ಹಾಗೂ ಕಾರ್ವಿುಕರಿಗೆ ಅನ್ಯಾಯ ಮಾಡುತ್ತಿವೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಗಳನ್ನು ಚರ್ಚೆ ಮಾಡದೆ ಜಾರಿಗೊಳಿಸಿದ್ದಾರೆ. ಈ ಮೂರು ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಚರ್ಚೆಗೆ ಅವಕಾಶ ನೀಡದೆ ಸುಗ್ರೀವಾಜ್ಞೆ ಮೂಲಕ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಇದು ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಹೊತ್ತು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಬಳಿಕ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಅವರು ರಸ್ತೆಯಲ್ಲೇ ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಪ್ರತಿಭಟನೆ ಕಾವು ಏಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಸಿಪಿ ಅನುಷಾ ಜಿ. ಅವರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಪ್ರತಿಭಟನಾಕಾರರು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ಜೆಡಿಎಸ್ ಮುಖಂಡ ಎನ್.ಎಚ್. ಕೋನರಡ್ಡಿ, ರೈತ ಮುಖಂಡ ಶಂಕರಪ್ಪ ಅಂಬಲಿ, ಮಲ್ಲಿಕಾರ್ಜುನ ಸಿಂಧಗಿ, ಸ್ವಾತಿ ಮಾಳಗಿ, ನ್ಯಾಯವಾದಿ ಎಸ್.ಎ. ಪವಾರ, ಆನಂದ ಅಧೋನಿ, ಬಾಲಚಂದ್ರ ಸುರಕೋಡ, ಮಂಜುನಾಥ ಬೋವಿ, ಇತರರು ಇದ್ದರು.