ಜಿಲ್ಲೆ

ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆ

ಹನೂರು: ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಮೀಪದಲ್ಲಿ ರೈತರು ಜಮೀನುಗಳಿಗೆ ತೆರಳುವ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ಸಂಚರಿಸಲು ತುಂಬ ತೊಂದರೆಯಾಗಿದೆ ಎಂದು ರೈತರು ದೂರಿದ್ದಾರೆ.

ಹಿಂದೆ ಈ ರಸ್ತೆಯು (ಓಣಿ) ಸಮತಟ್ಟಿನಿಂದ ಕೂಡಿತ್ತು. ಮಳೆಗಾಲದ ವೇಳೆ ಯಥೇಚ್ಛವಾದ ನೀರು ಈ ರಸ್ತೆಯ ಮೂಲಕ ಗ್ರಾಮದ ಕೆರೆಗೆ ಹರಿದು ಬರುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷದ ಹಿಂದೆ ಖಾಸಗಿ ವ್ಯಕ್ತಿಯೊಬ್ಬರೂ ಲೇಔಟ್ ನಿರ್ಮಿಸಿದ ಪರಿಣಾಮ ಈ ರಸ್ತೆಗೆ ಮಣ್ಣು ಸುರಿದು ಎತ್ತರ ಮಾಡಿದ್ದಾರೆ. ಪಕ್ಕದಲ್ಲಿ ಚರಂಡಿ ನಿರ್ಮಿಸಿದರೂ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ನೀರು ನಿಂತಲ್ಲೇ ಹಲವು ದಿನಗಳವರೆಗೆ ನಿಲ್ಲುವಂತಾಗಿದೆ. ಓಡಾಡಲು ಕಷ್ಟ ಪಡುವಂತಾಗಿದೆ. ಇತ್ತ ಅಪಾರ ಪ್ರಮಾಣದಲ್ಲಿ ಹರಿದು ಹೋಗುತ್ತಿದ್ದ ನೀರು ಕೆರೆಗೆ ಬಾರದಂತಾಗಿದೆ. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಹಲವು ಬಾರಿ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದ್ದರೂ ಕಿಂಚಿತ್ತೂ ಗಮನಹರಿಸಿಲ್ಲ.

ಇದೀಗ ಉತ್ತಮ ಮಳೆಯಾಗತ್ತಿರುವ ಹಿನ್ನೆಲೆಯಲ್ಲಿ ಜಮೀನುಗಳಲ್ಲಿ ಬಿತ್ತನೆ ಮಾಡಲಾಗಿದೆ. ಕೃಷಿ ಚಟುವಟಿಕೆ ಆರಂಭವಾಗಿದೆ. ಇದರಿಂದ ಈ ರಸ್ತೆಯಲ್ಲಿ ರೈತರ ಒಡಾಟ ಹೆಚ್ಚಾಗಿದೆ. ಆದರೆ ರಸ್ತೆಯಲ್ಲಿ ನೀರು ನಿಂತಿರುವುದರಿಂದ ಓಡಾಡಲು ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಗ್ರಾಪಂ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ನೀರು ನಿಲ್ಲದಂತೆ ಅಗತ್ಯ ಕ್ರಮವಹಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಈ ಭಾಗದ ರೈತರು ಒತ್ತಾಯಿಸಿದ್ದಾರೆ.