ಹೊಳೆನರಸೀಪುರ: ಜಲಾವೃತಗೊಂಡಿದ್ದ ಸಂಪರ್ಕರಸ್ತೆಯ ನೀರನ್ನು ತೆರವುಗೊಳಿಸುವ ಮೂಲಕ ಪೂಜೆ ಕೊಪ್ಪಲು ನಾಗರಿಕರ ಸಮಸ್ಯೆ ದೂರಾಗಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಿಂದ ಪೂಜೆ ಕೊಪ್ಪಲಿಗೆ ಸಂಪರ್ಕ ರಸ್ತೆ ಭಾರಿ ಮಳೆಯ ಪರಿಣಾಮ ನೀರು ಹರಿಯುವ ದಾರಿ ಮುಚ್ಚಿದ್ದರಿಂದ ರಸ್ತೆಯಲ್ಲ ಜಲಮಯವಾಗಿತ್ತು. ಈ ಕುರಿತು ಅ. 20ರಂದು ವಿಜಯವಾಣಿಯಲ್ಲಿ ‘ಪೂಜೆ ಕೊಪ್ಪಲು ಜನರ ಗೋಳು ಅಷ್ಟಿಷ್ಟಲ್ಲ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.
ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆ ಇಂಜಿನಿಯರ್ ಪೂಜೆ ಕೊಪ್ಪಲಿಗೆ ಭೇಟಿ ನೀಡಿ ರಸ್ತೆಯಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಿ ಸಂಚಾರಕ್ಕೆ ತೊಂದರೆಯಾಗದಂತೆ ತುರ್ತು ಕಾಮಗಾರಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಶನಿವಾರ ಹಿಟಾಚಿ ಮೂಲಕ ಮುಚ್ಚಿ ಹೋಗಿದ್ದ ನೀರು ಕಾಲುವೆಯನ್ನು ದುರಸ್ತಿಗೊಳಿಸಿ ರಸ್ತೆಯಲ್ಲಿ ನಿಂತಿದ್ದ ನೀರನ್ನು ತೆರವುಗೊಳಿಸಿದರು.
ಪೂಜೆ ಕೊಪ್ಪಲಿನ ಪುರಸಭಾ ಸದಸ್ಯೆ ಸಾವಿತ್ರಮ್ಮ ಅವರ ಪುತ್ರ ಆನಂದ್ ಸ್ಥಳದಲ್ಲೇ ಇದ್ದು ಕಾಮಗಾರಿ ಮಾಡಿಸಿ ಗ್ರಾಮಕ್ಕೆ ಒದಗಿದ್ದ ಸಮಸ್ಯೆಯನ್ನು ನಿವಾರಿಸಿದರು.
ರಸ್ತೆಯ ಪಕ್ಕದಲ್ಲಿ ಸುಮಾರು 100 ಮೀಟರ್ ಉದ್ದದ ನೀರು ಕಾಲುವೆ ಕಾಮಗಾರಿ ನಡೆಸಿ ಮುಚ್ಚಿ ಹೋಗಿದ್ದ ಪೈಪುಗಳನ್ನು ಮರುಜೋಡಿಸಿ ನೀರು ಕೆರೆಗೆ ಸರಾಗವಾಗಿ ಹರಿಯುವಂತೆ ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿಯಿಂದ ಪೂಜೆ ಕೊಪ್ಪಲಿನ ಸಂಪರ್ಕ ರಸ್ತೆ ಸುಗಮ ಸಂಚಾರಕ್ಕೆ ಸಿದ್ಧವಾದ್ದರಿಂದ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.