ಚಿಂಚೋಳಿ: ಕಾಳಗಿ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ಸದ್ದು ಮಾಡಿದ ಬೆನ್ನಲ್ಲೇ ಗಡಿ ತಾಲೂಕು ಚಿಂಚೋಳಿಯಲ್ಲೂ ಅನಧಿಕೃತ ಕಲ್ಲು ಗಣಿಗಳು ರಸ್ತೆಯನ್ನೇ ನುಂಗಿರುವ ಸುದ್ದಿಯಾಗಿದೆ.
ಭೈರಂಪಳ್ಳಿ-ಮಿರಿಯಾಣ ಮಧ್ಯೆ ಅನುಮತಿ ಪಡೆಯದ ಎರಡು ಕಲ್ಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ. ಸ್ಥಳೀಯರೇ ಮಾಲೀಕರಾಗಿದ್ದು, ಎಗ್ಗಿಲ್ಲದೆ ಕಲ್ಲುಗಳನ್ನು ತೆಗೆದು ದೂರದ ತೆಲಂಗಾಣ ಇತರ ಕಡೆ ಮಾರಾಟ ಮಾಡುತ್ತಿದ್ದಾರೆ.
ಕೆಲವರ್ಷ ಹಿಂದೆ ಮಿರಿಯಾಣ- ಭೈರಂಪಳ್ಳಿ- ಕೃಷ್ಟಾಪುರ ಗ್ರಾಮಸ್ಥರ ಅನುಕೂಲಕ್ಕಾಗಿ ನಿರ್ಮಿಸಿದ್ದ ಸುಮಾರು 40 ಅಡಿ ಸುಸಜ್ಜಿತ ರಸ್ತೆ ತೆಲಂಗಾಣಕ್ಕೆ ಕನೆಕ್ಟ್ ಮಾಡುತ್ತಿತ್ತು. ಆದರೆ ಗಣಿ ಚೋರರು ರಾತ್ರೋರಾತ್ರಿ ರಸ್ತೆಯನ್ನೇ ಕಿತ್ತೆಸೆದು ಫರ್ಸಿಗಳನ್ನು ಹೊರ ತೆಗೆದಿದ್ದಲ್ಲದೆ ಬಳಿಕ ಮರುಮ್ ಹಾಕಿ ಮರು ರಸ್ತೆ ನಿರ್ಮಿಸಿದ್ದಾರೆ. ಆದರೆ ಮರುಮ್ ರಸ್ತೆ ಉಳಿದಿರುವುದು ಕೇವಲ 20 ಅಡಿ. ಎರಡೂ ಗಣಿಗಳು ರಸ್ತೆಯಲ್ಲಿನ ತಲಾ 10 ಅಡಿ ಜಾಗ ಆಕ್ರಮಿಸಿಕೊಂಡಿವೆ.
ಗಣಿಕಳ್ಳರು ಯಾರ ಭಯವಿಲ್ಲದೆ ರಸ್ತೆ ನುಂಗಿ ಹಾಕಿದರೂ ಸಂಬAಧಿತ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಾರ್ವಜನಿಕರು ದೂರು ನೀಡಿದರೂ ನೋ ಫಾಯಿದಾ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಅಕ್ರಮ ಗಣಿಗಳ ಬಗ್ಗೆ ವಿಷಯ ಚರ್ಚೆಗೆ ಬಂದಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಡಾ.ಅವಿನಾಶ ಜಾಧವ್ ಸೂಚನೆ ನೀಡಿದರೂ ಅಧಿಕಾರಿಗಳು ಮಾತ್ರ ಸೈಲೆಂಟ್ ಆಗಿದ್ದಾರೆ.
ಕೂಡಲೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ರಸ್ತೆ ನುಂಗಿ ನೀರು ಕುಡಿದು ತೇಪೆ ಹಚ್ಚುವ ಕಾರ್ಯಕ್ಕೆ ಭೂ ಮಾಫಿಯಾದವರು ಮುಂದಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ದಾಖಲಾಗದ ಎಫ್‌ಐಆರ್: ಗಣಿಗಾರಿಕೆಗೆ ರಸ್ತೆಯನ್ನೇ ಅಗೆದಿರುವ ದಂಧೆಕೋರರ ವಿರುದ್ಧ ದೂರು ದಾಖಲಿಸಲು ಸಂಬAಧಿತ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ವಾರದ ಹಿಂದೆ ಡಾಂಬರ್ ರಸ್ತೆ ಕಿತ್ತು ಕಲ್ಲುಗಳನ್ನು ಹೊರತೆಗೆದಿದ್ದು, ಜಿಪಂ ಉಪ ವಿಭಾಗದ ಜೆಇ ಭೇಟಿ ನೀಡಿ ಪರಿಶೀಲಿಸಿ ಎರಡು ದಿನವಾದರೂ ಯಾರೊಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ.
ದೂರವಾಣಿ ಸ್ವೀಕರಿಸದ ಎಇಇ: ಭೈರಂಪಳ್ಳಿ-ಮಿರಿಯಾಣ ಮಾರ್ಗಮಧ್ಯದ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ಪಡೆಯಲು ಪಂಚಾಯತ್ ರಾಜ್ ಇಲಾಖೆ ಎಇಇ ಪ್ರವೀಣಕುಮಾರ ದಿನ್ನೆ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕೊನೆಯದಾಗಿ ಬೇರೊಬ್ಬರು ಮಾತನಾಡಿ, ಸಾಹೇಬ್ರು ಮನೆಯಲ್ಲಿಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದರು.