ಮೈಸೂರು: ಮುಂಬೈ ಮಾದರಿಯಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಟಾರ್ ಮತ್ತು ಕಾಂಕ್ರೀಟ್ ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಯನ್ನು ಮುಚ್ಚಲು ರ‌್ಯಾಪೀಡ್ ಹಾರ್ಡನಿಂಗ್ ಸಿಮೆಂಟ್ ಬಳಸಲಾಗುತ್ತಿದೆ. ಮೊದಲ ಹಂತದಲ್ಲಿ ಗುಂಡಿಗಳನ್ನು ಏಕರೂಪದ ಆಕಾರದಲ್ಲಿ ಕತ್ತರಿಸಿಕೊಂಡು ಸಡಿಲವಾದ ವಸ್ತುಗಳನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಿ ನಂತರ ಕಾಂಕ್ರೀಟ್ ಹಾಕಲಾಗುತ್ತದೆ ಎಂದು ತಿಳಿಸಿದರು.
ಹಾಕಿದ ಕಾಂಕ್ರೀಟ್ ತಕ್ಷಣದಲ್ಲೇ ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಇದಕ್ಕೆ ಕ್ಯೂರಿಂಗ್ ಮಾಡಿ 8 ಗಂಟೆಗಳ ನಂತರ ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಬಿಟ್ಟುಕೊಡಬಹುದಾಗಿದೆ. ಈ ಕ್ರಮದಿಂದ ಮುಂಬೈ ರಸ್ತೆಗಳ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ವಾಹನ ಸುಗಮ ಸಂಚಾರಕ್ಕೂ ತೊಂದರೆ ಆಗುವುದಿಲ್ಲ. ಆದ್ದರಿಂದ ಮೈಸೂರು ಪಾಲಿಕೆ ಕೂಡ ಈ ಕ್ರಮ ಅಳವಡಿಸಿಕೊಳ್ಳಲು ಯೋಜಿಸಿದೆ ಎಂದರು.
ಉಪ ಮೇಯರ್ ಡಾ.ಜಿ.ರೂಪಾ, ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಇನ್ನಿತರರು ಇದ್ದರು.