Oplus_131072 
ಜಿಲ್ಲೆ

ರಸ್ತೆಗೆ ವಾಲಿದ ವಿದ್ಯುತ್ ಕಂಬಗಳು

ಯಳಂದೂರು: ತಾಲೂಕಿನ ಗೌಡಹಳ್ಳಿ ಗ್ರಾಮದಿಂದ ವಡಗೆರೆ ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯುತ್ ಕಂಬಗಳು ನೆಲಕ್ಕೆ ವಾಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.

ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯು ಕಿರಿದಾಗಿದ್ದು, ಇಲ್ಲಿ ಒಂದು ವಾಹನ ಬಂದರೆ ಮತ್ತೊಂದು ವಾಹನ ಸಂಚಾರ ಮಾಡಬೇಕಾದರೆ ಚಾಲಕರು ಇಕ್ಕಟ್ಟಿಗೆ ಸಿಲುಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿರುವ ಪ್ರೈಮರಿ ಹಾಗೂ ಹೈಯರ್ ಸೆಕೆಂಡರಿ ವಿದ್ಯುತ್ ತಂತಿಗಳು ಹಾದುಹೋಗಿರುವ ವಿದ್ಯುತ್ ಕಂಬಗಳು ವಾಲಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರೂ ಅಪಾಯ ಕಟ್ಟಿಟ್ಟ ಬುತ್ತಿ.

ಇಲ್ಲಿ ರೈತರ ಜಮೀನುಗಳೇ ಹೆಚ್ಚಾಗಿವೆ. ಕಬ್ಬಿನ ಲಾರಿ ಹಾಗೂ ಟ್ರಾೃಕ್ಟರ್‌ಗಳು ಈ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತವೆ. ಈ ರಸ್ತೆಯಲ್ಲಿ ಎರಡು ಕಡೆ ತೀವ್ರ ತಿರುವುಗಳಿವೆ. ಕಬ್ಬಿನ ಲೋಡ್ ಹೆಚ್ಚು ತುಂಬುವುದರಿಂದ ವಾಲಿರುವ ವಿದ್ಯುತ್ ಕಂಬಕ್ಕೆ ತಾಕಿದರೆ ಅಪಾಯವಾಗುವ ಸಂಭವವಿದೆ. ಇದರ ಕೆಳಗೇ ಜಾನುವಾರುಗಳು ನೀರು ಕುಡಿಯುವ ತೊಟ್ಟಿಯೂ ಇದೆ. ಕುರಿ, ದನಗಾಹಿಗಳು ತಮ್ಮ ಜಾನುವಾರುಗಳಿಗೆ ಇಲ್ಲಿ ನೀರು ಕುಡಿಸುತ್ತಾರೆ. ಹರಿಯುವ ನೀರು ವಿದ್ಯುತ್ ಕಂಬದ ಬುಡಕ್ಕೂ ಹೋಗುತ್ತದೆ. ಹಾಗಾಗಿ, ವಾಲಿರುವ ಕಂಬ ಮತ್ತಷ್ಟು ವಾಲಿ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಜನ, ಜಾನುವಾರುಗಳ ಪ್ರಾಣಕ್ಕೆ ಕಂಕಟವಾಗುವ ಸಾಧ್ಯತೆಯೇ ಅಧಿಕವಾಗಿದೆ.

ಸೆಸ್ಕ್ ನಿರ್ಲಕ್ಷೃಕ್ಕೆ ಗ್ರಾಮಸ್ಥರ ಅಸಮಾಧಾನ: ಹಲವು ಬಾರಿ ಈ ಬಗ್ಗೆ ಸೆಸ್ಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಂಬಗಳನ್ನು ರಸ್ತೆಯಿಂದ ದೂರಕ್ಕೆ ವರ್ಗಾಯಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ವಹಿಸಿಲ್ಲ. ಈ ಸಮಸ್ಯೆ ಕಳೆದ ಒಂದು ವರ್ಷದಿಂದಲೂ ಇದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರೂ ಕ್ರಮ ವಹಿಸಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಸೇರಿದಂತೆ ಗ್ರಾಮಸ್ಥರ ಆಗ್ರಹವಾಗಿದೆ.

ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಕಂಬಗಳು ವಾಲಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು. ಲಿಂಗರಾಜು, ಸೆಸ್ಕ್, ಎಇಇ, ಯಳಂದೂರು