ಚನ್ನಾಪುರ ಗೇಟ್ ಸಮೀಪ ಲೊಕೋಪಯೋಗಿ ಇಲಾಖೆಯ 6 ಕೋಟಿ ರೂ. ಅಂದಾಜು ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಶಾಸಕ ಎಚ್.ಕೆ.ಸುರೇಶ್ ನೆರವೇರಿಸಿದರು. 
ಜಿಲ್ಲೆ

ರಸ್ತೆಗಳು ಉತ್ತಮವಾಗಿದ್ದರೆ ಗ್ರಾಮಗಳ ಅಭಿವೃದ್ಧಿ

ಬೇಲೂರು: ದೇಶದ ಜೀವಾಳವೇ ಗ್ರಾಮಗಳಾಗಿದ್ದು, ಗ್ರಾಮಗಳಿಂದ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಉತ್ತಮವಾಗಿದ್ದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಹೊಂದುತ್ತವೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಚನ್ನಾಪುರ ಗೇಟ್ ಸಮೀಪ ಲೊಕೋಪಯೋಗಿ ಇಲಾಖೆಯ 6 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಿ.ಟಿ ರಸ್ತೆಯಿಂದ ಹೊಸಮನೆಹಳ್ಳಿ-ಹಲ್ಮಿಡಿ ಮಾರ್ಗವಾಗಿ ಅಂಬಳೆ, ಹಿರೇಮಗಳೂರು ಸೇರುವ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಾಕಷ್ಟು ವರ್ಷಗಳಿಂದ ಈ ಭಾಗದ ರಸ್ತೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿತ್ತು. ಈ ಭಾಗದ ಗ್ರಾಮಗಳಿಂದ ಚಿಕ್ಕಮಗಳೂರು-ಬೇಲೂರು-ಹಾಸನಕ್ಕೆ ತೆರಳುವ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತಾಗಿತ್ತು. ಜತೆಗೆ ಉತ್ತಮ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದರಿಂದ ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡಿ 6 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ನಗರಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಿಂದ ಸಾರ್ವಜನಿಕರಿಗೆ ಉಪಯೋಗವಾದರೆ ಅದಕ್ಕಿಂತ ಸಾರ್ಥಕತೆ ಬೇರೊಂದಿಲ್ಲ. ಇದರೊಂದಿಗೆ ಕನ್ನಡಕ್ಕೆ ಪ್ರಥಮ ಶಿಲಾ ಶಾಸನ ಕೊಟ್ಟ ಹಲ್ಮಿಡಿ ಗ್ರಾಮ ನಮ್ಮ ಕ್ಷೇತ್ರದಲ್ಲಿರುವುದೇ ಹೆಮ್ಮೆಯ ಸಂಗತಿ. ಇಲ್ಲಿನ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸಲು ಪ್ರಯತ್ನಿಸುತ್ತಿದೆ. ಸಮಗ್ರ ಅಭಿವೃದ್ಧಿಗಾಗಿ ಹೆಚ್ಚಿನ ಮೊತ್ತದ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಮನವಿ ಮಾಡಿರುವುದಲ್ಲದೆ, ಶಿಲಾಶಾಸನದ ಪ್ರತಿಕೃತಿ ಮಂಟಪದ ಉದ್ಘಾಟನೆಗೆ ಆಗಮಿಸುವಂತೆ ಮನವಿ ಮಾಡಿದ್ದೇನೆ. ಇದರೊಂದಿಗೆ ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ದಿಪಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ರೇಣುಕುಮಾರ್, ನಾರಾಯಣಪುರ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಪ್ರಶಾಂತ್, ಮಾಜಿ ಅಧ್ಯಕ್ಷೆ ಕವಿತಾ, ಸದಸ್ಯರಾದ ಜಗದೀಶ್, ಪರ್ವತೇಗೌಡ, ಬಾಷಾ, ಗಣೇಶ, ಮೋಹನ್, ಹೇಮಾವತಿ ಪ್ರವೀಣ್, ಮುಖಂಡರಾದ ಚನ್ನೇಗೌಡ, ಎಇಇ ದಯಾನಂದ್, ಇಂಜಿನಿಯರ್ ಸೋಮಶೇಖರ್ ಇದ್ದರು.