ಚಿತ್ರದುರ್ಗ: ರಸ್ತೆ ಅವೈಜ್ಞಾನಿಕ ನಿರ್ಮಾಣ, ಬೇಜವಾಬ್ದಾರಿ ನಿರ್ವಹಣೆಯಿಂದ ಅಪಘಾತಗಳಾದರೆ ಸಂಬಂಧಿಸಿದ ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಸೋಮವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾರ್ಕಿಂಗ್, ಬ್ಲಿಂಕರ್ಸ್ ಇತ್ಯಾದಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಅನುಪಾಲನಾ ವರದಿ ಸಲ್ಲಿಸದ ಅಧಿಕಾರಿಗಳಿಗೆ ನೋಟಿಸ್ ಜಾರಿಗೆ ನಿರ್ದೇಶಿಸಿದರು.
ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರಸಭೆಯಿಂದ ಬೀದಿ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕೆಂದರು. ನಗರದಲ್ಲಿ ಆಟೋ ನಿಲ್ದಾಣಗಳಿಗಾಗಿ 27 ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ 12 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು. ಬೇಡಿಕೆ ಆಧರಿಸಿ ಡಿವೈಡರ್ ತೆರವುಗೊಳಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 400 ಜನರು ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ದಿನಕ್ಕೆ ಸರಾಸರಿ ಒಂದಕ್ಕಿಂತ ಹೆಚ್ಚಿನ ಜನರ ಸಾವು ಸಂಭವಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಅಧಿಕಾರಿಗಳು, ಗುತ್ತಿಗೆದಾರರು ತಮ್ಮ ಕರ್ತವ್ಯ ನಿರ್ವಹಿಸಿದರೆ ಸಾವನ್ನು ನಿಯಂತ್ರಿಸಬಹುದಾಗಿದೆ ಎಂದರು.
ಹಿರಿಯೂರು ಜೆಜೆಹಳ್ಳಿ ಬಳಿ 20 ಎಕರೆ ವಿಸ್ತೀರ್ಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕಾಗಿ ದೇವರಾಜ ಅರಸು ಟರ್ಕ್ ಟರ್ಮಿನಲ್ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹೆದ್ದಾರಿ ಇಕ್ಕೆಲಗಳಲ್ಲಿ ಅನಧಿಕೃತ ಗೂಡಂಗಡಿ, ಹೋಟೆಲ್ ಹಾಗೂ ಡಾಬಾಗಳನ್ನು ತೆರವುಗೊಳಿಸುವಂತೆ ಡಿಸಿ ಸೂಚಿಸಿದರು.
ಸಂಚಾರ ಪೊಲೀಸ್ ಇನ್ಸಪೆಕ್ಟರ್ ರಾಜು, ನಗರದ ಸಂಚಾರ ಸುಧಾರಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆಗೆ ಡಿಸಿ, ಎಸ್‌ಪಿ ಚಾಲನೆ ನೀಡಿದರು. ಆರ್‌ಟಿಒ ಭರತ್ ಎಂ.ಕಾಳಿಸಿಂಗೆ, ರಾ.ಹೆ.ಪ್ರಾಧಿಕಾರದ ಯೋಜನಾ ನಿರ್ದೇಶಕ ಗಡ್ಡಿಪತಿ ಗೌರವ್, ಲೋಕೋಪಯೋಗಿ ಇಲಾಖೆ ಇಇ ಮೋನಪ್ಪ, ಡಿವೈಎಸ್ಪಿಗಳಾದ ಪಿ.ಕೆ.ದಿನಕರ್, ರಾಜಣ್ಣ, ಶಿವಕುಮಾರ್ ಇತರ ಅಧಿಕಾರಿಗಳಿದ್ದರು.
ಬಸ್‌ಗಳ ಸಂಚಾರ ಮಾರ್ಗ ಬದಲಿಗೆ ನಿರ್ಧಾರ
ನಗರದ ಬಿ.ಡಿ. ರಸ್ತೆ ಮೂಲಕ ಬೆಂಗಳೂರು, ಶಿವಮೊಗ್ಗ ಹಾಗೂ ಚಳ್ಳಕೆರೆ ಮಾರ್ಗಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಸಂಚಾರ ಮಾರ್ಗ ಬದಲಾವಣೆಗೆ ಸಭೆ ತೀರ್ಮಾನಿಸಿತು. 1200 ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತಿದ್ದು, ಗಾಂಧಿಸರ್ಕಲ್, ಎಸ್‌ಬಿಐ ವೃತ್ತದಲ್ಲಿ ವಾಹನದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಹಳೆಯ ರಾ.ಹೆ.ಬಳಸಿ ಬಸ್‌ಗಳ ಸಂಚಾರಕ್ಕೆ ಅವಕಾಶಕ್ಕೆ ಆದೇಶಿಸಲು ಹಾಗೂ ಗಾಂಧಿ ವೃತ್ತದಲ್ಲಿ ಪ್ರತಿಭಟನೆ, ಜಾಥಾಕ್ಕೆ ಅನುಮತಿ ನೀಡದಿರಲು ಸಭೆ ತೀರ್ಮಾನಿಸಿತು.
---
ಕೋಟ್
ಹಳೆಯ ಗೂಡ್ಸ್ ವಾಹನ, ಟ್ರಾೃಕ್ಟರ್, ಟ್ರ್ಯಾಲಿ, ಲಾರಿ, ಟಿಪ್ಪರ್‌ಗಳ ಹಿಂಬದಿ ರಿಫ್ಲೆಕ್ಟರ್‌ಗಳಿಲ್ಲದೆ ಸಾಕಷ್ಟು ಅಪಘಾತ, ಸಾವು ನೋವು ಸಂಭವಿಸುತ್ತಿವೆ. ಆದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲೆಕ್ಟರ್‌ಗಳ ಅಳವಡಿಸುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಬೈಕ್ ಸವಾರಿ ವೇಳೆ 9 ತಿಂಗಳ ಮೇಲಿನ ಹಾಗೂ 4 ವರ್ಷದ ಮಕ್ಕಳಿಗೆ ಶಿಶುಕವಚ ಕಡ್ಡಾಯಗೊಳಿಸಲಾಗಿದೆ. ನಾಲ್ಕು ಆಸನಗಳ ಮೇಲಿನ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರಾೃಕಿಂಗ್, ಮಹಿಳೆಯರು, ಮಕ್ಕಳ ಹಿತದೃಷ್ಟಿಯಿಂದ ಪ್ಯಾನಿಕ್ ಬಟನ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಭರತ್ ಎಂ.ಕಾಳಿಸಿಂಗೆ, ಆರ್‌ಟಿಒ, ಚಿತ್ರದುರ್ಗ.
-----