ಹುಮನಾಬಾದ್: ಪಟ್ಟಣ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಗುಣಮಟ್ಟದ ರಸ್ತೆಗಳ ನಿರ್ಮಾಣ ಅಗತ್ಯವಿದೆ. ಹೀಗಾಗಿ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ಹಳ್ಳಿಖೇಡ್ (ಬಿ) ಪಟ್ಟಣದಲ್ಲಿ ಸೋಮವಾರ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಸೀಮಿನಾಗನಾಥ ದೇವಾಲಯ ಕ್ರಾಸ್‌ನಿಂದ ಪಟ್ಟಣದ ಬಸವೇಶ್ವರ ವೃತ್ತದವರೆಗೆ ಚತುಷ್ಪಥ ರಸ್ತೆ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಯೋಜನೆಡಿಯಲ್ಲಿ ೩.೭೦ ಕೋಟಿ ರೂ. ವೆಚ್ಚದಲ್ಲಿ ಪುರಸಭೆಯ ಮಲ ಮತ್ತು ಕೆಸರು ಸಂಸ್ಕಾರಣಾ ಘಟಕ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಂತೆ ಚತುಷ್ಪಥ ರಸ್ತೆಗೆ ಹಾಗೂ ಮಲ ಮತ್ತು ಕೆಸರು ಸಂಸ್ಕಾರಣಾ ಘಟಕ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ರಸ್ತೆಯ ನಡುವೆ ವಿದ್ಯುತ್ ದೀಪ ಅಳವಡಿಕೆಗೂ ಕೆಕೆಆರ್‌ಡಿಬಿ ಯೋಜನೆಯಡಿ ಅನುದಾನದಲ್ಲಿ ಒದಗಿಸಲಾಗುವುದು. ನಿಗದಿತ ಅವಧಿ ಹಾಗೂ ಗುಣಮಟ್ಟದಿಂದ ಕಾಮಗಾರಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದಲ್ಲಿ ೧೬೫ ಕೋಟಿ ರೂ. ಅಮೃತ ಯೋಜನೆಯಡಿ ಕಾಮಗಾರಿ ಚಾಲನೆ ನೀಡಲಾಗಿದ್ದು, ಆರಂಭವುಗೊಂಡಿದೆ. ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಜನಪ್ರತಿನಿಧಿಗಳ ಸಹಕಾರ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಪಟ್ಟಣದಲ್ಲಿ ನಾಲ್ಕು ಕೋಟಿ ರೂ. ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಡೆಸಬೇಕು. ಇಲ್ಲಿಯ ಮುಖಂಡರು, ಸಾರ್ವಜನಿಕರು ಸಹ ಕಾಮಗಾರಿ ಗುಣಮಟ್ಟದ ಮೇಲೆ ನಿಗಾವಹಿಸಬೇಕು ಎಂದರು.
ಮಾಜಿ ಸಚಿವ ರಾಜಶೇಖರ ಪಾಟೀಲ್ ಶಾಸಕರಾಗಿದ್ದಾಗ ಗ್ರಾಪಂದಿಂದ ಪುರಸಭೆ ಮಾಡಿಸುವುದರ ಜತೆಗೆ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಅವರು ಐದು ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದು, ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಪೂರಕವಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ಜಗದೇವಿ ಶಂಕೆ, ಮುಖ್ಯಾಧಿಕಾರಿ ನಿಂಗಪ್ಪ, ಸದಸ್ಯರಾದ ಮಹಾಂತಯ್ಯ ತೀರ್ಥ, ಅಬ್ದುಲ್ ರಸಾಕ್, ಮಲ್ಲಿಕಾರ್ಜುನ ಪ್ರಭಾ, ನಾಗರಾಜ ಹಿಬಾರೆ, ನರಸಿಂಗ್, ರವೀಂದ್ರ, ಎಂ.ಡಿ. ಆರೀಫ್, ವೀರಶೆಟ್ಟಿ, ಸುನೀಲ, ರೇವಪ್ಪ, ರವಿ ಇತರರಿದ್ದರು.
ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ: ರಸ್ತೆ ಕಾಮಗಾರಿ ಭೂಮಿ ಪೂಜೆ ಚಾಲನೆ ನಂತರ ನಡೆದ ಕಾರ್ಯಕ್ರಮದ ಭಾಷಣ ಸಮಯದಲ್ಲಿ ವೇದಿಕೆ ಕೆಳಗಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕೆಲ ಸಮಯ ಗೊಂದಲ ನಿರ್ಮಾಣವಾಗಿತ್ತು. ಎಂಎಲ್ಸಿ ಪಾಟೀಲ್ ವೇದಿಕೆಯಲ್ಲಿ ಮಾತನಾಡುತ್ತಿರುವ ಸಮಯದಲ್ಲಿ ಕೆಳಗಡೆ ಕೆಲ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ಉಂಟಾಗಿ ಕೈಕೈ ಮೀಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆ ಶಾಸಕ ಡಾ.ಸಿದ್ದಲಿಂಗಪ್ಪ ಹಾಗೂ ಎಂಎಲ್ಸಿ ಅವರು ತಮ್ಮ ಬೆಂಬಲಿತ ಕಾರ್ಯಕರ್ತರಿಗೆ ಶಾಂತ ರೀತಿಯಿಂದ ಇರುವಂತೆ ಕೋರಿದರು. ಸ್ಥಳದಲ್ಲಿಯೇ ಇದ್ದ ಸಿಪಿಐ ಗುರು ಪಾಟೀಲ್ ಹಾಗೂ ಸಿಬ್ಬಂದಿ, ಕೆಲ ಮುಖಂಡರು ಎರಡು ಕಡೆಯ ಕಾರ್ಯಕರ್ತರಿಗೆ ಶಾಂತಪಡಿಸಿದ್ದು. ಕಾರ್ಯಕ್ರಮ ಮುಂದುವರಿಯಿತು.