ಶೃಂಗೇರಿಯಲ್ಲಿ ಬಿಜಿಎಸ್ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸ್ತೆ ಸುರಕ್ಷಾ ಅರಿವು ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕ ಮೋಹನ್ ರಾಜಣ್ಣ ಅವರನ್ನು ರೋಟರಿ ಅಧ್ಯಕ್ಷ ಕೆ.ಸಿ.ನಾಗೇಶ್ ಗೌರವಿಸಿದರು. ನಾಗರಾಜ್ ಇದ್ದರು.  
ಜಿಲ್ಲೆ

ರಸ್ತೆ ಸುರಕ್ಷಾ ನಿಯಮ ಪಾಲಿಸಿ

ಶೃಂಗೇರಿ: ರಸ್ತೆ ಸುರಕ್ಷಾ ಕುರಿತು ಪ್ರತಿಯೊಬ್ಬರಿಗೂ ಹೆಚ್ಚಿನ ಅರಿವು ಇರಬೇಕು. ಜನಸಂದಣಿ ಪ್ರದೇಶಗಳಲ್ಲಿ ಜಾಗರೂಕರಾಗಿ ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಹಾಯಕ ಪೊಲೀಸ್ ಉಪನಿರೀಕ್ಷಕ ಮೋಹನ್ ರಾಜಣ್ಣ ತಿಳಿಸಿದರು.

ಮಂಗಳವಾರ ರೋಟರಿಯಿಂದ ಬಿಜಿಎಸ್ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಸ್ತೆ ಸುರಕ್ಷಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಪ್ರತಿ ಗಂಟೆಗೆ 20ಕ್ಕಿಂತ ಹೆಚ್ಚು ವಾಹನಚಾಲಕರು ಸಾವಿಗೀಡಾಗಲು ಅವರ ಅವಸರವೇ ಪ್ರಮುಖ ಕಾರಣ. ವಿದ್ಯಾರ್ಥಿಗಳು ಚಿಕ್ಕವಯಸ್ಸಿನಲ್ಲಿ ರಸ್ತೆ ಸುರಕ್ಷಾ ಅರಿವು ಹೊಂದಬೇಕು. ರಸ್ತೆ ದಾಟುವಾಗ ಅಥವಾ ವಾಹನ ಚಲಾಯಿಸುವಾಗ ನಿಯಮಗಳನ್ನು ಪಾಲಿಸಿದರೆ ಅವಘಡ ಸಂಭವಿಸುವ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿದರು.

ಪಿಎಸ್‌ಐ ನಾಗರಾಜ್ ಮಾತನಾಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಅಪರಾಧ. ಸೀಟ್‌ಬೆಲ್ಟ್ ಹಾಕುವ ನಿಯಮವನ್ನು ವಾಹನ ಚಾಲಕರು ಪಾಲಿಸಬೇಕು ಎಂದರು.

ರಸ್ತೆ ಸುರಕ್ಷಾ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಏರ್ಪಡಿಸಲಾಗಿತ್ತು. ರೋಟರಿ ಅಧ್ಯಕ್ಷ ಕೆ.ಸಿ.ನಾಗೇಶ್, ಕಾರ್ಯದರ್ಶಿ ಸುರೇಶ್ ಹೆಗ್ಡೆ ಇದ್ದರು.