ಚಿಕ್ಕಬಳ್ಳಾಪುರ: ಅಪಘಾತ ಪ್ರಕರಣಗಳ ನಿಯಂತ್ರಣಕ್ಕೆ ರಸ್ತೆ ಸುರಕ್ಷತೆಯ ಮುಂಜಾಗ್ರತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಾಲ ಕಾಲಕ್ಕೆ ಪ್ರಕರಣಗಳ ಅಂಕಿ ಅಂಶಗಳ ವೈಜ್ಞಾನಿಕ ವಿಶ್ಲೇಷಣೆಯಾಗಬೇಕು. ಇದರಿಂದ ನಿಖರ ಕಾರಣಗಳನ್ನು ತಿಳಿದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ, ಹೆಚ್ಚಿನ ಅವಘಡಗಳು ಉಂಟಾಗುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಯೋಜನೆ ರೂಪಿಸಬೇಕು ಎಂದರು.
ಅಗತ್ಯವಿರುವೆಡೆ ಎಚ್ಚರಿಕೆಯ ನಾಮಫಲಕ ಮತ್ತು ಬ್ಯಾರಿಕೇಡ್ ಅಳವಡಿಕೆ, ಮಂಚನಬಲೆ ಅಂಡರ್ ಪಾಸ್ ನಿರ್ಮಾಣ, ಕಣಿವೆ ರಸ್ತೆಗಳ ವಿಸ್ತರಣೆ, ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಸೇರಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್, ಚಿಂತಾಮಣಿ ಉಪ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ, ನಗಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಭಾಸ್ಕರ್ ಇತರರಿದ್ದರು.
ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು: ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣ(ಸರ್.ಎಂ.ವಿ ಜಿಲ್ಲಾ ಕ್ರೀಡಾಂಗಣ)ವನ್ನು ಖೇಲೋ ಇಂಡಿಯಾ ಯೋಜನೆಯಡಿ ಮೇಲ್ದರ್ಜೆಗೇರಿಸುವ ವಿವಿಧ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಆರ್.ಲತಾ ಕ್ರೀಡಾ ಇಲಾಖೆಗೆ ಸೂಚಿಸಿದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಕ್ರೀಡಾಂಗಣಗಳಲ್ಲಿ 12.60 ಕೋಟಿ ರೂ.ವೆಚ್ಚದಲ್ಲಿ 18 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಇತರರಿದ್ದರು.