ಜಿಲ್ಲೆ

ರಸ್ತೆ ವಿಸ್ತರಣೆಗೆ ಆಗ್ರಹಿಸಿ ಪ್ರತಿಭಟನೆ

ಕೊಳ್ಳೇಗಾಲ: ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಹಾಗೂ ಡಾ.ರಾಜ್‌ಕುಮಾರ್ ರಸ್ತೆಯನ್ನು ಶೀಘ್ರದಲ್ಲಿ ವಿಸ್ತರಣೆಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆ ಜಾಥಾ ನಡೆಸಿದರು.

ಪಟ್ಟಣದ ಬಸ್ ನಿಲ್ದಾಣದಿಂದ ಹೊರಟ ಜನಪರ ವೇದಿಕೆಯ ಪದಾಧಿಕಾರಿಗಳು ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಮೌನ ಮೆರವಣಿಗೆ ನಡೆಸಿದ ಬಳಿಕ ನಗರಸಭೆಗೆ ತೆರಳಿ ನಗರಸಭೆ ವ್ಯವಸ್ಥಾಪಕ ಲಿಂಗರಾಜು ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಜಕಾವುಲ್ಲಾ ಮಾತನಾಡಿ, ಕಳೆದ 20 ವರ್ಷಗಳಿಂದ ಈ ರಸ್ತೆಗಳ ವಿಸ್ತರಣೆ ವಿಚಾರವು ನನೆಗುದಿಗೆ ಬಿದ್ದಿದೆ. ಪ್ರತಿವರ್ಷ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಳತೆ ನಡೆಸುತ್ತಾರೆ. ಇಲ್ಲಿಯವರೆಗೆ ಯಾವುದೇ ಗಂಭೀರ ಹೆಜ್ಜೆ ಇಡಲಾಗಿಲ್ಲ ಎಂದು ತಿಳಿಸಿದ್ದಾರೆ. ಈ ರಸ್ತೆಯಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ರಸ್ತೆ ಕೆರೆಯಾಗಿ ಮಾರ್ಪಡುತ್ತದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಇವೆಲ್ಲದಕ್ಕೂ ನಗರಸಭೆ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದರು. ರಸ್ತೆ ವಿಸ್ತರಣೆ ತಡವಾದರೆ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಗೌರವಧ್ಯಕ್ಷ ವಿಶ್ವನಾಥ್, ಪದಾಧಿಕಾರಿಗಳಾದ ಕೆ.ಕೆ.ಮೂರ್ತಿ, ನಟರಾಜು, ಶ್ರೀನಿವಾಸ್ ರಾವ್, ಮೊಹಮ್ಮದ್ ಸಿದ್ದಿಕ್, ಸೈಯದ್ ಸಲ್ಮಾನ್, ಚಂದು, ದೀನದಯಾಳ್, ಲೀಲಾವತಿ, ಕಾಮಗೆರೆ ಶಿವಮ್ಮ, ಎಚ್.ಮರಮ್ಮ ಇತರರು ಇದ್ದರು.