ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ 169ರ ಸಂಕ್ಲಾಪುರ ಬಳಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಾರ್ಮಿಕ ಜಯಂತ ಪೂಜಾರಿ ಎಂಬುವವರ ಮನೆ ಕುಸಿದಿದೆ.
ಕಡೆಮನೆ ಗ್ರಾಮದಿಂದ ಉಳವಳ್ಳಿವರೆಗಿನ 5 ಕಿಮೀ ರಸ್ತೆಯನ್ನು ಚತುಷ್ಪಥವನ್ನಾಗಿ ಮಾಡಲಾಗುತ್ತಿದೆ. ಗುರುವಾರ ಜೆಸಿಬಿಯಿಂದ ರಸ್ತೆ ಪಕ್ಕದ ಧರೆ ಅಗೆಯುವ ಸಂದರ್ಭದಲ್ಲಿ ಮನೆ ಮುಂಭಾಗದ ಗೋಡೆ ಕುಸಿದಿದೆ. ಜಗುಲಿಯಲ್ಲಿದ್ದ ಪೀಠೋಪಕರಣಗಳು ಕೆಳಗೆ ಬಿದ್ದಿವೆ. ಮನೆ ಸಂಪೂರ್ಣ ಕುಸಿಯುವ ಸಾಧ್ಯತೆ ಇದ್ದು ಕಾರ್ಮಿಕನ ಕುಟುಂಬ ಅತಂತ್ರವಾಗಿದೆ. ಹೆದ್ದಾರಿ ಪ್ರಾಧಿಕಾರ ವಿಭಾಗವು ತಕ್ಷಣ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ರಸ್ತೆ ಅಗಲೀಕರಣದಿಂದ ಇನ್ನಷ್ಟು ಮನೆಗಳು ಅಪಾಯದಲ್ಲಿವೆ.