ಚಿತ್ರದುರ್ಗ: ನಗರಸಭೆಯಿಂದ ಅನುಮತಿ ಪಡೆಯದೆ ಲೋಕೋಪಯೋಗಿ ಸೇರಿ ಯಾವುದೇ ಇಲಾಖೆಯಿಂದ ನಗರದಲ್ಲಿ ಆಗಿರುವ ನೂತನ ರಸ್ತೆಗಳು, ವಿಭಜಕಗಳು, ಸ್ಟ್ರೀಟ್ ಲೈಟ್‌ಗಳನ್ನು ಹಸ್ತಾಂತರ ಮಾಡಿಕೊಳ್ಳಬಾರದು…
ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಶನಿವಾರ ನೂತನ ಅಧ್ಯಕ್ಷೆ ಬಿ.ಎನ್. ಸುಮಿತಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಂಜುನಾಥ್ ಗೊಪ್ಪೆ ಹಸ್ತಾಂತರ ಬೇಡವೆಂದು ಒತ್ತಾಯಿಸಿದರು. ಇದಕ್ಕೆ ಕೆಲ ಸದಸ್ಯರು ದನಿಗೂಡಿಸಿದರು.
ನಗರದ ಪ್ರಮುಖ ರಸ್ತೆಗಳು ಹಾಗೂ ವಿಭಜಕಗಳು ಅವೈಜ್ಞಾನಿಕವಾಗಿವೆ. ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿವೆ. ಅಪಘಾತಗಳು ಸಂಭವಿಸಿವೆ. ಅಲ್ಲದೆ, ಮಳೆಯಾದಗಲೆಲ್ಲ ನೀರು ನಿಲ್ಲುತ್ತದೆ. ಇದರಿಂದ ತೊಂದರೆ ಅನುಭವಿಸುತ್ತಿರುವುದು ಸಾರ್ವಜನಿಕರು. ವಿಭಜಕ ತೆರವುಗೊಳಿಸಲು ಈಗ ಅನುದಾನ ಕೊಡುವವರ‌್ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ಕಾಮಗಾರಿಯಿಂದ ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆ ನಿಮಗೆ ತಿಳಿದಿದೆಯೇ ಎಂದು ಸುಮಿತಾ, ಸದಸ್ಯ ನಸರುಲ್ಲಾ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಕಾಮಗಾರಿಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಬಿಜೆಪಿ ಸದಸ್ಯ ಶ್ರೀನಿವಾಸ್ ಸಮರ್ಥಿಸಿಕೊಂಡರು. ಪಿಡಬ್ಲುೃಡಿ ಇಂಜಿನಿಯರ್ ಕೂಡ ವೈಜ್ಞಾನಿಕವಾಗಿದೆ ಎಂದರು. ಆದರೆ, ಆಡಳಿತಾರೂಢ ಸದಸ್ಯರು ಇದಕ್ಕೆ ಒಪ್ಪದೆ, ನಗರಸಭೆಗೆ ಹಸ್ತಾಂತರ ಮಾಡಿಕೊಳ್ಳುವುದು ಬೇಡ. ಕಾಮಗಾರಿ ಮಾಡಿರುವವರೆ, ನಿರ್ವಹಣೆ ಮಾಡಲಿ ಎಂದು ಅಧ್ಯಕ್ಷರಿಗೆ ಆಗ್ರಹಿಸಿದರು.
ಸದಸ್ಯ ಹರೀಶ್ ಮಾತನಾಡಿ, 7.25 ಅನುದಾನದಡಿ ನಗರಸಭೆಯಿಂದ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಸೌಲಭ್ಯ ನೀಡಬೇಕು. ಆದರೆ, ವಿಳಂಬ ಮಾಡಲಾಗುತ್ತಿದೆ. ಯಾವಾಗೋ ವಿತರಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸದಸ್ಯ ದೀಪು ಮಾತನಾಡಿ, ಲ್ಯಾಪ್‌ಟಾಪ್ ವಿತರಿಸಲು ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿ ಮೂರು ವರ್ಷವಾದರೂ ನೀಡಿಲ್ಲ. ಕಾಯಿಸಿ, ಸತಾಯಿಸಿ ಕೊಟ್ಟರೆ ಯೋಜನೆ ಉಪಯೋಗವಾಗದು. ಶೀಘ್ರ ವಿತರಿಸಲು ಕ್ರಮವಹಿಸಿ ಎಂದು ಒತ್ತಾಯಿಸಿದರು. ನಸರುಲ್ಲಾ, ನಮ್ಮಲ್ಲೇ ಇಚ್ಛಾಶಕ್ತಿ ಕೊರತೆ ಇದೆ. ಹೀಗಾಗಿಯೇ ತಡವಾಗುತ್ತಿದೆ ಎಂದು ಬೇಸರಿಸಿದರು.
ಸದಸ್ಯ ಮೊಹಮ್ಮದ್ ಜೈಲ್ಲಾದ್ದೀನ್ ಮಾತನಾಡಿ, ಬೇರೆ ವಾರ್ಡ್‌ಗಳಲ್ಲಿ ಒಂದೆರಡು ಕಾಮಗಾರಿಗೆ 25 ಲಕ್ಷ ರೂ., 35 ಲಕ್ಷ ರೂ. ಅನುದಾನ ನೀಡಿದರೆ, ನಮ್ಮಂತ ಸ್ಲಂ ವಾರ್ಡ್‌ಗಳ ಸದಸ್ಯರು ಅನುದಾನ ಯಾರಲ್ಲಿ ಕೇಳಬೇಕು. ನಮ್ಮಲ್ಲಿ ಶೇ 90ರಷ್ಟು ಎಸ್ಸಿ ಸಮುದಾಯದವರಿದ್ದು, ಹೆಚ್ಚಿನ ಅನುದಾನ ನೀಡಿ ಎಂದು ಅಧ್ಯಕ್ಷರಿಗೆ ಒತ್ತಾಯಿಸಿದರು.
ವಾರ್ಡ್‌ನಲ್ಲಿ ಕೊಳವೆಬಾವಿ ಕೊರೆಸಿ ಏಳೆಂಟು ತಿಂಗಳಾದರೂ ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕಲ್ಪಿಸಿಲ್ಲ. 3 ದುರಸ್ತಿಯಲ್ಲಿದ್ದು, ಅಧಿಕಾರಿಗಳು ಗಮನಹರಿಸಿಲ್ಲ. ಎಲ್ಲ ವಾರ್ಡ್‌ಗಳಲ್ಲೂ ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದ್ದು, ನನ್ನ ವಾರ್ಡ್‌ನಲ್ಲಿ ಯಾವಾಗ ಕೊರೆಸುತ್ತೀರಾ?. ವಿಳಂಬ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಇಂಜಿನಿಯರ್ ಮುನಿಸ್ವಾಮಿ ಅವರನ್ನು ತರಾಟೆ ತೆಗೆದುಕೊಂಡರು.
ಮಹಿಳೆಯರನ್ನು ಗೌರವಿಸಿ: ಅಧಿಕಾರಿಗಳ ವಿಳಂಬದಿಂದಾಗಿ ಕಳೆದ ಸಭೆಯನ್ನು ಮುಂದೂಡಲಾಗಿತ್ತೆ ಹೊರತು ಆಡಳಿತ ವೈಫಲ್ಯದಿಂದ ಅಲ್ಲ ಎಂದು ಸುಮಿತಾ ಹೇಳಿದರು. ಅಧ್ಯಕ್ಷರಿಗೆ ಅವಮಾನ ಎಂಬ ಹೇಳಿಕೆಗಳನ್ನು ಕೆಲ ಸದಸ್ಯರು ನೀಡಿದ್ದಾರೆ. ಸಮರ್ಥವಾಗಿ ನಿಭಾಯಿಸಲು ನಾನೂ ಸಿದ್ಧನಿದ್ದೇನೆ. ಮಹಿಳೆಯರನ್ನು ಮೊದಲು ಗೌರವಿಸಿ. ರಾಜಕೀಯ ಮಾಡುವುದಾದರೆ, ಅದಕ್ಕೂ ನಾನು ಸಿದ್ಧ ಎಂದರು.
60ರಿಂದ 70 ಮನೆ ತೆರವಿಗೆ ಒಪ್ಪಿಗೆ: 330 ಅಡಿ ಉದ್ದ, 40 ಅಡಿ ಅಗಲದ ರಸ್ತೆ ಒತ್ತುವರಿ ಸಂಬಂಧ ವಿಜಯನಗರ ಬಡಾವಣೆಯ ಕೆಲ ನಿವಾಸಿಗಳ ದೂರಿನ ಮೇರೆಗೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲು ನಗರಸಭೆಗೆ ಸೂಚನೆ ಬಂದಿದ್ದು, ಅದರಂತೆ 60ರಿಂದ 70 ಅನಧಿಕೃತ ಮನೆಗಳನ್ನು ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ: ನಗರ ವ್ಯಾಪ್ತಿಯ ಎಲ್ಲೆಂದರಲ್ಲಿ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಸಾರ್ವಜನಿಕರ-ವಾಹನ ಸವಾರರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ತೆರವುಗೊಳಿಸಿ, ನಗರದ 14 ಸ್ಥಳಗಳಲ್ಲಿ ‘ಡೇ-ನಲ್ಮ್’ ಯೋಜನೆಯಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಡಿಪಿಆರ್ ತಯಾರಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷೆ ಶ್ರೀದೇವಿ, ಪೌರಾಯುಕ್ತೆ ಎಂ.ರೇಣುಕಾ ಇದ್ದರು.