ಚಾಮರಾಜನಗರ: ರಸ್ತೆಯುದ್ಧಕ್ಕೂ ಬಿದ್ದಿರುವ ಕಸದ ರಾಶಿ, ಚರಂಡಿಯಲ್ಲಿ ತುಂಬಿರುವ ಹೂಳಿನಿಂದ ಸುತ್ತಮುತ್ತಲಿನ ಪ್ರದೇಶ ಗಬ್ಬುನಾರುತ್ತಿದ್ದು, ಸಾರ್ವಜನಿಕರು ಸಂಚರಿಸಲು ಸಮಸ್ಯೆ ಅನುಭವಿಸುವಂತಾಗಿದೆ.
ನಗರದ ನಗರಸಭೆ ವ್ಯಾಪ್ತಿಗೆ ಬರುವ 23ನೇ ವಾರ್ಡ್‌ನ ಚೆನ್ನಿಪುರಮೋಳೆಗೆ ಹೋಗುವ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ವಿಶ್ವಹಿಂದೂ ಪರಿಷತ್ ಶಾಲೆಯ ಸುತ್ತಮುತ್ತ ಇರುವ ರಸ್ತೆಗಳಲ್ಲಿ ಕಸದ ರಾಶಿಯೇ ಸಂಗ್ರಹವಾಗಿದ್ದು, ರಸ್ತೆಯಲ್ಲಿ ಸಂಚಾರ ಮಾಡಬೇಕಾದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳಲ್ಲಿ ಕಸದ ರಾಶಿ ಸಂಗ್ರಹವಾಗಿರುವುದಲ್ಲದೇ, ಚರಂಡಿಗಳಲ್ಲೂ ಕೂಡ ಹೆಚ್ಚಿನ ಕಸ ಸಂಗ್ರಹವಾಗಿ ಚರಂಡಿ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೇ ರಸ್ತೆಗೆ ಹರಿಯುತ್ತಿದೆ. ಇದರಿಂದಾಗ ಈರಸ್ತೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರ ಸಂಚಾರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧ ಪಟ್ಟ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.