ಜಿಲ್ಲೆ

ರಸ್ತೆ ಬದಿಯಲ್ಲಿ ಟೊಮ್ಯಾಟೊ ತ್ಯಾಜ್ಯ

ಕೋಲಾರ: ಎಪಿಎಂಸಿಯಲ್ಲಿ ವಿಲೇವಾರಿಯಾಗದ, ಹಾನಿಯಾದ ಟೊಮ್ಯಾಟೊಗಳನ್ನು ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಬದಿ ಎಸೆದಿರುವುದರಿಂದ ದುರ್ನಾತ ಬೀರುತ್ತಿದೆ. ಬಯೋ ಗ್ಯಾಸ್ ಘಟಕ ಸ್ಥಾಪನೆಗೆ ಸರ್ಕಾರ 1.75 ಕೋಟಿ ರೂ. ಅನುದಾನ ನೀಡಿದ್ದರೂ ಸ್ಥಾಪನೆಗೆ ಯಾವ ಸಂಸ್ಥೆಗಳೂ ಮುಂದೆ ಬರುತ್ತಿಲ್ಲ.

ಕೋಲಾರ ಎಪಿಎಂಸಿಗೆ ಜಿಲ್ಲೆ ಮಾತ್ರವಲ್ಲದೆ ಚಿಕ್ಕಬಳ್ಳಾಪುರ, ಆಂಧ್ರದಿಂದಲೂ ಆವಕವಾಗುತ್ತದೆ. ಇದೇ ಮಾರುಕಟ್ಟೆಯಲ್ಲೇ ತರಕಾರಿ ವಹಿವಾಟು ಕೂಡ ನಡೆಯುತ್ತಿದೆ. ಆದರೆ ತ್ಯಾಜ್ಯ ವಿಲೇವಾರಿಗೆ ಮಾತ್ರ ಸ್ಥಳಾವಕಾಶ ಕೊರತೆ ಇರುವುದು ಎಪಿಎಂಸಿಗೆ ದೊಡ್ಡ ತಲೆನೋವಾಗಿದೆ.

ನಿತ್ಯ 10,000ರಿಂದ 15,000 ಕ್ವಿಂಟಾಲ್ ಟೊಮ್ಯಾಟೊ ಆವಕವಾಗುತ್ತದೆ. ಗುಣಮಟ್ಟವಿಲ್ಲದ ಟೊಮ್ಯಾಟೊಗಳನ್ನು ದೂರದ ರಾಜ್ಯಗಳಿಗೆ ಕಳುಹಿಸಲಾಗದು. ಇಂತಹದ್ದನ್ನು ತರದಂತೆ ದಲ್ಲಾಳಿಗಳು ಹೇಳುತ್ತಿದ್ದರೂ ಕೆಲ ರೈತರು ತಂದು ಹಾಕುತ್ತಿದ್ದಾರೆ. ಮಾರಾಟವಾಗದಿದ್ದರೆ ಬಾಕ್ಸ್ ಖಾಲಿ ಮಾಡಲು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಾರೆ, ಹರಾಜು ಕಾಣದ ಟೊಮ್ಯಾಟೊ ಕೂಡ ರಸ್ತೆ ಪಾಲಾಗುತ್ತಿದೆ.

ದುರ್ನಾತ: ಅಮ್ಮೇರಹಳ್ಳಿ ಕೆರೆಯಂಚಿನ ಹಾಗೂ ಬೈಪಾಸ್‌ನಲ್ಲಿ ಬೆಸ್ಕಾಂನ ವಿದ್ಯುತ್ ಉಪ ಕೇಂದ್ರದ ಕಾಂಪೌಂಡ್ ಹಿಂಭಾಗದ ಸೇವಾ ರಸ್ತೆಯುದ್ದಕ್ಕೂ ರಾಶಿ ಹಾಕಲಾಗಿದ್ದು, ರಸ್ತೆಯಲ್ಲಿ ಸಾಗುವ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಕೆರೆಯಂಚಿನಲ್ಲಿ ಎಸೆಯುತ್ತಿರುವ ತ್ಯಾಜ್ಯ ಮಳೆನೀರಿನ ಜತೆ ಕೆರೆಯ ಒಡಲು ಸೇರುತ್ತಿದೆ.

ಸ್ವಚ್ಛತೆ ಗುತ್ತಿಗೆ: ಎಪಿಎಂಸಿ ಪ್ರಾಂಗಣದೊಳಗೆ ಬೀಳುವ ತ್ಯಾಜ್ಯ ವಿಲೇಗೆ ಗುತ್ತಿಗೆ ವಹಿಸಿದೆ. ಮೂರ್ನಾಲ್ಕು ದಿನಗಳಿಂದ ಕನಿಷ್ಠವೆಂದರೂ 25ರಿಂದ 45 ಟನ್ ಟೊಮ್ಯಾಟೊ ತ್ಯಾಜ್ಯ ಬೀಳುತ್ತಿದೆ. ವಿಲೇವಾರಿಗೆ ಜಾಗ ಇಲ್ಲದಿರುವುದರಿಂದ ಗುತ್ತಿಗೆದಾರ ಸ್ವಂತ ಜಾಗದಲ್ಲಿ ವಿಲೇವಾರಿ ಮಾಡುತ್ತಿದ್ದಾನೆ, ರಸ್ತೆ ಬದಿಯಲ್ಲಿ ಎಸೆಯುವುದಿಲ್ಲ, ಎಸೆದರೆ ಕ್ರಮ ವಹಿಸುವ ಎಚ್ಚರಿಕೆ ನೀಡಲಾಗಿದೆ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಟಿ.ಎಸ್. ರವಿಕುಮಾರ್.

ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶ ಒದಗಿಸುವ ಬಗ್ಗೆ ಎಪಿಎಂಸಿ ಕಾರ್ಯದರ್ಶಿಗಳು ಜಿಪಂ ಸಿಇಒ ಎಚ್.ವಿ. ದರ್ಶನ್ ಗಮನಕ್ಕೆ ತಂದಾಗ ಕೊಂಡರಾಜನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಜಾಗ ನೋಡಲು ಅಧಿಕಾರಿಗಳಿಗೆ ಸೂಚಿಸಿರುವುದರಿಂದ ಎಪಿಎಂಸಿ ಜಾಗದ ನಿರೀಕ್ಷೆಯಲ್ಲಿದೆ.

ಕನಸಾಗಿಯೇ ಉಳಿದ ಘಟಕ: ಪ್ರತಿ ಟನ್ ಟೊಮ್ಯಾಟೊ ಅಥವಾ ತರಕಾರಿ ತ್ಯಾಜ್ಯದಿಂದ 40 ಕೆಜಿ ಬಯೋಗ್ಯಾಸ್ ಉತ್ಪಾದಿಸಬಹುದಾಗಿದ್ದು, ಘಟಕ ಸ್ಥಾಪಿಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನಕ್ಕೆ ಎಪಿಎಂಸಿ ಕೈ ಹಾಕಿತ್ತು. ಸರ್ಕಾರದಿಂದ ಅನುದಾನ ಸಹ ಬಿಡುಗಡೆಯಾಗಿತ್ತು. ಆದರೆ ಯಾರೂ ಟೆಂಡರ್‌ನಲ್ಲಿ ಪಾಲ್ಗೊಳ್ಳದಿರುವುದರಿಂದ ನನೆಗುದಿಗೆ ಬಿದ್ದಿದೆ. ಘಟಕ ಸ್ಥಾಪನೆ ಬಗ್ಗೆ ಮತ್ತೆ ಕೇಂದ್ರ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗಬೇಕಿರುವುದರಿಂದ ಸದ್ಯಕ್ಕಂತೂ ಬಯೋ ಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆ ಕನಸಾಗಿಯೇ ಉಳಿದಿದೆ.

ರಸ್ತೆ ಬದಿ ಎಸೆದಿರುವ ಟೊಮ್ಯಾಟೊ ತ್ಯಾಜ್ಯದಿಂದ ಸುತ್ತಮುತ್ತಲ ಪ್ರದೇಶ ದುರ್ನಾತ ಬೀರುತ್ತಿದ್ದು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಬಾಲನ್, ಕೋಲಾರ ನಿವಾಸಿ ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿರುವುದರಿಂದ ಆಗುತ್ತಿರುವ ತೊಂದರೆಗೆ ಸಂಬಂಧಪಟ್ಟವರ ವಿರುದ್ಧ ದೂರು ನೀಡಲಾಗುವುದು ಎಂದು ನಗರಸಭೆ ಎಚ್ಚರಿಸಿದೆ. ಈ ಕುರಿತು ಕರಪತ್ರ ಮುದ್ರಿಸಿ ರೈತರಿಗೆ, ಮಂಡಿ ಮಾಲೀಕರಿಗೆ ವಿತರಿಸುವ ಜತೆಗೆ ಧ್ವನಿವರ್ಧಕದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಬಯೋಗ್ಯಾಸ್ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆಯಾಗಿತ್ತಾದರೂ ಟೆಂಡರ್‌ನಲ್ಲಿ ಯಾರೂ ಪಾಲ್ಗೊಂಡಿರಲಿಲ್ಲ. ಮುಂದಿನ ಪ್ರಕ್ರಿಯೆಗೆ ಸರ್ಕಾರದ ಅನುನೋದನೆ ಅವಶ್ಯವಿದೆ. ಟಿ.ಎಸ್.ರವಿಕುಮಾರ್, ಕಾರ್ಯದರ್ಶಿ, ಎಪಿಎಂಸಿ, ಕೋಲಾರ