ಜಿಲ್ಲೆ

ರಸ್ತೆ ಬದಿಯ ಗೂಡಂಗಡಿಗಳ ತೆರವು

ಅಶೋಕ್ ಕುಮಾರ್ ಎನ್

ರಾಯಚೂರು: ನಗರದ ಸ್ಟೇಷನ್ ರಸ್ತೆಯಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಗೂಡಂಗಡಿಗಳನ್ನು ಗುರುವಾರ ತೆರವುಗೊಳಿಸಲು ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ರಸ್ತೆಯಲ್ಲಿ ಹೆಚ್ಚಿನ ಓಡಾಟವಿದ್ದು, ವ್ಯಾಪಾರಸ್ಥರು ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದಾಗಿ ಪಾದಾಚಾರಿಗಳು ರಸ್ತೆಯಲ್ಲಿ ಓಡಾಡುವಂತಾಗಿದೆ. ಬಸವೇಶ್ವರ ವೃತ್ತದಿಂದ ಸ್ಟೇಷನ್ ವೃತ್ತದವರೆಗೆ ಫುಟ್‌ಪಾತ್‌ನಲ್ಲಿ ಹಣ್ಣಿನ ಅಂಗಡಿ ಸೇರಿ ಇತರ ವಸ್ತುಗಳ ವ್ಯಾಪಾರ ನಡೆಸಲಾಗುತ್ತಿತ್ತು. ಕೆಲವರು ಫುಟ್‌ಪಾತನ್ನೇ ಹೋಟೆಲ್ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಕೆಲವು ಅಂಗಡಿಗಳವರು ರಸ್ತೆವರೆಗೆ ಸಾಮಗ್ರಿಗಳನ್ನಿಟ್ಟು ಜನರು ಓಡಾಡದಂತೆ ಮಾಡಿದ್ದರು.

ಇತ್ತೀಚೆಗೆ ಕಾರೊಂದು ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದರಿಂದ ಪೊಲೀಸ್ ಉನ್ನತಾಧಿಕಾರಿಗಳು ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವಂತೆ ನೀಡಿದ ಸೂಚನೆ ಮೇರೆಗೆ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿದರು. ನಗರಸಭೆ ವಾಹನದಲ್ಲಿ ಫುಟ್‌ಪಾತ್‌ನಲ್ಲಿದ್ದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಕೆಲ ವ್ಯಾಪಾರಾಸ್ಥರು ವಿರೋಧ ವ್ಯಕ್ತಪಡಿಸಿ ನೋಟಿಸ್ ನೀಡಿಲ್ಲ ಎಂದು ವಾದ ಮಾಡಿದರು. ನಿಮಗೆ ಯಾರೂ ಪರವಾನಗಿ ನೀಡಿಲ್ಲದ ಕಾರಣ ನೋಟಿಸ್ ನೀಡುವ ಅಗತ್ಯವಿಲ್ಲವೆಂದು ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸಲಾಯಿತು.