ಚಿಂತಾಮಣಿ : ನಗರದಲ್ಲಿ ಪದೇ ಪದೆ ಭುಗಿಲೇಳುವ ತ್ಯಾಜ್ಯ ಸಮಸ್ಯೆಯನ್ನು ಬೆಂಕಿಯ ಮೂಲಕ ಶಮನಗೊಳಿಸುವ ಪ್ರಯತ್ನ ಎಗ್ಗಿಲ್ಲದೇ ನಡೆಯುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಮಾತ್ರ ಇದಕ್ಕೆ ಕಡಿವಾಣ ಹಾಕದೆ ಕಣ್ಮುಚ್ಚಿ ಕುಳಿತಿರುವ ಪರಿಣಾಮ ನಗರದಲ್ಲಿ ಪರಿಸರ ಮಾಲಿನ್ಯ ದಿನದಿಂದ ದಿನ್ಕಕೆ ಹೆಚ್ಚಾಗುತ್ತಿದೆ.ನಗರದ ವಿವಿಧಡೆ ಕಸಕ್ಕೆ ಬೆಂಕಿ ಹಚ್ಚುತ್ತಿರುವುದು ಗಮನಕ್ಕೆ ಬಂದರೂ ನಗರಸಭೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಶನಿವಾರವಾ ಬೆಳಗ್ಗೆ ನಗರದ ಗಾಂಧಿನಗರ ಬಡಾವಣೆಯ ಊಲವಾಡಿ ರಸ್ತೆ ಬದಿಯಲ್ಲಿರುವ ಕಸಕ್ಕೆ ಬೆಂಕಿ ಹಚ್ಚಲಾಗಿದೆ. ನಗರಸಭೆಯವರು ಅರ್ಧ ಕಸ ತೆಗೆದುಕೊಂಡ ಹೋದ ನಂತರ ಬೆಂಕಿ ಕಾಣಿಸಿಕೊಂಡಿರುವುದರಿಂದ ಪೌರಕಾರ್ಮಿಕರೇ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ ಎಂಬ ಅನುಮಾನ ಜನರಲ್ಲಿ ಮೂಡಿದೆ.
ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 19(5)ಅಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ರಾಜ್ಯ ಸರ್ಕಾರವು ಕಸಕ್ಕೆ ಬೆಂಕಿ ಹಚ್ಚುವುದನ್ನು ನಿಬರ್ಂಧಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗದಲ್ಲಿ ಕಸಕ್ಕೆ ಬೆಂಕಿ ಹಚ್ಚುವಂತಿಲ್ಲ. ಆದರೂ ಆದೇಶ ಉಲ್ಲಂಘಿಸಿ ಬೆಂಕಿ ಹಚ್ಚಿದರೆ 5 ಲಕ್ಷ ರೂ.ವರೆಗೆ ದಂಡ ಅಥವಾ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಕಠಿಣ ಕಾನೂನು ಇದ್ದರೂ ಕಸಕ್ಕೆ ಬೆಂಕಿ ಹಚ್ಚುವ ಪ್ರವೃತ್ತಿ ಮಾತ್ರ ನಿಂತಿಲ್ಲ.ಕೆಲವರು ಕಸದ ರಾಶಿ ಕರಗಿಸಲು ಬೆಂಕಿ ಹಚ್ಚಿದರೆ ಇನ್ನೂ ಕೆಲವು ಕಡೆ ನಗರಸಭೆಯಿಂದಲೇ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಇದು ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕಸಕ್ಕೆ ಬೆಂಕಿ ಹಚ್ಚುವಾ ವಿರುದ್ಧ ಕಠಿಣ ಕ್ರಮ ಜರುಗಿಸದೆ ಇರುವುದು ಹಾಗೂ ಪೌರಕಾರ್ಮಿಕರಿಗೆ ಈ ಬಗ್ಗೆ ಸರಿಯಾಗಿ ಅರಿವು ಮೂಡಿಸದೆ ಇರುವುದು ಇಂತಹ ಘಟನೆಗಳಿಗೆ ಕಾರಣವಾಗಿದೆ.
ಕಸಕ್ಕೆ ಬೆಂಕಿ ಹಾಕದಂತೆ ನಗರಸಭೆಯ ವ್ಯಾಪ್ತಿಯ ಜನರಿಗೆ ಅರಿವು ಮೂಡಿಸುವುದರ ತೆಗೆ ನಗರಸಭೆಯ ಪೌರಕಾರ್ಮಿಕರಿಗೂ ಸಹ ಕಾರ್ಯಾಗಾರ ನಡೆಸಿ ಕಸಕ್ಕೆ ಬೆಂಕಿ ಹಾಕದಂತೆ ಹಾಗೂ ಆದರಿಂದ ಆಗುವ ಅನಾಹುತದ ಬಗ್ಗೆ ಅರಿವು ಮೂಡಿಸುತ್ತೇವೆ. ಉಮಾಶಂಕರ್, ಪೌರಾಯುಕ್ತ, ನಗರಸಭೆ ಚಿಂತಾಮಣಿ