ಜಿಲ್ಲೆ

ರಸ್ತೆ ಬದಿಗಳಲ್ಲಿ ಕಸ ಎಸೆದರೆ ದಂಡ


ಹಾಸನ : ಪ್ರತಿಯೊಬ್ಬ ನಗರದ ಪ್ರಜೆಯು ಕೂಡ ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಕಸವನ್ನು ಮೂಲದಲ್ಲಿಯೇ ಕಡ್ಡಾಯವಾಗಿ ವಿಂಗಡಿಸುವುದು ಸಾರ್ವಜನಿಕರ ಆದ್ಯ ಕರ್ತವ್ಯ ಎಂದು ನಗರ ಸಭೆ ಅಧ್ಯಕ್ಷ ಆರ್. ಮೋಹನ್ ತಿಳಿಸಿದರು.

ಹಾಸನದ ನಗರ ಸಭೆ ವತಿಯಿಂದ ನಗರ ಸಭೆ ಆವರಣದಲ್ಲಿ ಸೋಮವಾರ ಸ್ವಚ್ಚ ಭಾರತ್ ಅಭಿಯಾನದಡಿ ಸ್ವಚ್ಚತೆಗಾಗಿ ಸಂಯುಕ್ತ ಭಾರತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಹಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು ತಪ್ಪಿದ್ದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮ 2016 ರ ಪ್ರಕಾರ ದಂಡ ವಿಧಿಸಲಾಗುವುದು ಎಂದು ತಿಳಿಸಿದರಲ್ಲದೇ ಕಸ ಸಂಗ್ರಹಿಸುವ ವಾಹನಗಳು ಮನೆ ಮನೆ ಬಳಿಗೆ ಬರುವಾಗ ಸಾರ್ವಜನಿಕರು ಹಸಿ ಕಸ ಹಾಗೂ ಒಣಕಸವನ್ನು ವಿಂಗಡಿಸಿ ಹಾಕುವಂತೆ ಮನವಿ ಮಾಡಿದರು.

ನಗರಸಭೆ ಆಯುಕ್ತ ಪರಮೇಶ್ವರಪ್ಪ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಎಲ್ಲರೂ ಕೈ ಜೋಡಿಸಬೇಕೆಂದು ತಿಳಿಸಿದರು.

ಸೆ.26 ರಿಂದ ನ.01 ರ ವರೆಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಸೈಕಲ್ ಜಾತಾ, ಕಾಲು ನಡೆಗೆ ಜಾತಾ, ಜಾನಪದ ಕಲಾಂಡಗಳಿಂದ ಜಾಗೃತಿ ಕಾರ್ಯಕ್ರಮ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ, ಗುಂಪು ಸಂವಾದ, ಚಿತ್ರಕಲಾ ಸ್ಪರ್ಧೆ, ಓಟ ಸ್ಪರ್ಧೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾಯರ್ಕಕ್ರಮದಲ್ಲಿ ನಗರಸಭೆ ಸದಸ್ಯರುಗಳಾದ ಸಂತೋಷ್, ಕೃಷ್ಣಮೂರ್ತಿ, ವ್ಯವಸ್ಥಾಪಕ ಪ್ರಕಾಶ್, ಪರಿಸರ ಕಾರ್ಯಪಾಲಕ ಅಭಿಯಾಂತರುಗಳಾದ ರಂಗಸ್ವಾಮಿ, ವೆಂಕಟೇಶ್ ಕೆ.ಆರ್, ಆರೋಗ್ಯ ನಿರೀಕ್ಷಕರು ಪ್ರಸಾದ್, ಜಾನಪದ ಕಲಾವಿದ ಬಿ.ಟಿ ಮಾನವ ಇತರರು ಇದ್ದರು.