ಜಿಲ್ಲೆ

ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯೊಂದಿಗೆ ಚರ್ಚೆ, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಭರವಸೆ, ಸ್ಮಶಾನ ನಿರ್ಮಾಣಕ್ಕೆ ಜಾಗ ಮಂಜೂರಿಗೆ ಮನವಿ

ಆನೇಕಲ್: ರಾಜ್ಯ ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಪ್ರಮುಖವಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ತಾಲೂಕಿನ ಇಂಡ್ಲವಾಡಿಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸ್ಮಶಾನದ ಭೂಮಿ ಅವಶ್ಯಕತೆ ಇದ್ದು, ಜಾಗ ಪರಿಶೀಲಿಸಿ ಸ್ಮಶಾನಕ್ಕೆ ಮೀಸಲಿಡುವ ಬಗ್ಗೆ ಕ್ರಮವಹಿಸಲಾಗುವುದು ಎಂದರು.

ಅರಣ್ಯ ಇಲಾಖೆಯ ಅಂಚಿನಲ್ಲಿರುವ ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಸರ್ಕಾರದ ಉನ್ನತಮಟ್ಟದ ಅಧಿಕಾರಿ ಸಭೆ ಕರೆದು ಪರಿಹಾರ ಕಲ್ಪಿಸಲಾಗುವುದು ಎಂದರು.

ಕೆಲ ರೈತರು ಸಾಕಷ್ಟು ವರ್ಷಗಳಿಂದ ಜಮೀನನಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಈಗ ಈ ಭೂಮಿ ಅರಣ್ಯ ಪ್ರದೇಶ ಎಂದು ವಶ ಪಡಿಸಿಕೊಳ್ಳಲು ಮುಂದಾಗುತ್ತಿರುವ ದೂರನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇ ನಡೆಸಿ ಹಂತ ಹಂತವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಸೂರ್ಯನಗರ ನಾಲ್ಕನೇ ಹಂತಕ್ಕೆ ಜಮೀನು ನೀಡಿರುವವರನ್ನು ಗುರುತಿಸಿ ಸಕಾಲದಲ್ಲಿ ಪರಿಹಾರ ಕೊಡಿಸಲು ಶೀಘ್ರವೇ ಕ್ಯಾಂಪ್ ಕ್ರಮ ಕೈಗೊಳ್ಳಲಾಗುವುದು ಎಂದರು.

ಫಾರಂ 53 ರಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವವ ರೈತರಿಗೆ ಬೆಂಗಳೂರಿನ 18 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರವೇ ಆದೇಶಿಸಿದೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಗಮನ ಸೆಳೆದು ಪರಿಹಾರ ಕಲ್ಪಿಸಲಾಗುವುದು ಎಂದರು.

ಗ್ರಾಪಂ ಸದಸ್ಯೆ ಶುಭಾನಂದ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೆಲವು ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ದೊರೆತಿದೆ. ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ದೊರಕಿದೆ ಎಂದರು.

ಇಂಡ್ಲವಾಡಿ ಮುಖಂಡ ಐಸಿಎಂ ಕೃಷ್ಣಮೂರ್ತಿ, ಇಂಡ್ಲವಾಡಿ ಗ್ರಾಪಂನಲ್ಲಿ ಗ್ರಾಮಲೆಕ್ಕಿಗ ಅಧಿಕಾರಿಗಳು ಇದ್ದರು ಜನರ ಕೈಗೆ ಸಿಗುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ವಿಫಲರಾಗಿದ್ದಾರೆ ಎಂದು ದೂರಿದರು.

ಗ್ರಾಪಂ ಸದಸ್ಯರಾದ ತುಳಸಿ ನಾಯಕ್, ರೇಣುಕಾ, ಸೌಮ್ಯ ಅಶೋಕ್ ರೆಡ್ಡಿ, ಲೊಕೇಶ್, ನೀಲಮ್ಮ, ರತ್ನಮ್ಮ, ನಾಗಮ್ಮ ಮತ್ತಿತರರು ಇದ್ದರು.

ಮದುವೆಯಾಗಲು ಹೆಣ್ಣು ಕೊಡ್ತಿಲ್ಲ: ಆನೇಕಲ್ ತಾಲೂಕಿನ ಕಾಡಂಚಿನಲ್ಲಿರುವ ಚೂಡಹಳ್ಳಿ ಸೇರಿ ಹಲವು ಗ್ರಾಮಗಳಿಗೆ ಸೂಕ್ತ ರಸ್ತೆ ಇಲ್ಲ. ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಈ ಭಾಗದ ಹಳ್ಳಿಗಳಿಗೆ ಸಮರ್ಪಕ ರಸ್ತೆ ಇಲ್ಲದ ಕಾರಣ ಹಲವು ಯುವಕರಿಗೆ ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂದ ಗ್ರಾಮ ಪಂಚಾಯಿತಿ ಸದಸ್ಯ ಆದೂರು ಪ್ರಕಾಶ್, ರಸ್ತೆ ನಿರ್ಮಿಸಿಕೊಡಿ, ಇಲ್ಲವೇ ದಯಾಮರಣ ಕಲ್ಪಿಸಿ ಎಂದು ಜಿಲ್ಲಾಧಿಕಾರಿಗಳ ಬಳಿ ಅಲವತ್ತುಕೊಂಡರು.