ಸೋಮವಾರಪೇಟೆ ಸಮೀಪದ ಮಸಗೋಡು, ನೇರುಗಳಲೆ, ಅರೇಯೂರು, ಹೊಸಳ್ಳಿ, ಕಣಿವೆ ಗ್ರಾಮದ ರಸ್ತೆಯನ್ನು ದುರಸ್ತಿಪ ಡಿಸಲು ಅನುದಾನ ಕೊಡಿ ಎಂದು ಆಗ್ರಹಿಸಿ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ್ ಚಂದ್ರಹಾಸ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಸಗೋಡು, ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎನ್. ಅನಂತ್, ಪದಾಧಿಕಾರಿಗಳಾದ ಟಿ.ಕೆ.ಲೋಕಾನಂದ, ಎಚ್.ಕೆ. ಲೋಕೇಶ್, ಎಸ್.ಆರ್. ಅರುಣ್‌ರಾವ್ ಇದ್ದರು.  
ಜಿಲ್ಲೆ

ರಸ್ತೆ ದುರಸ್ತಿಪಡಿಸದಿದ್ದರೆ ಧರಣಿ

ಸೋಮವಾರಪೇಟೆ: ನೇರುಗಳಲೆ, ಅರೇಯೂರು, ಹೊಸಳ್ಳಿ, ಕಣಿವೆ ಮಾರ್ಗದ ಲೋಕೋಪಯೋಗಿ ರಸ್ತೆಯನ್ನು ಮುಂದಿನ ಹದಿನೈದು ದಿನಗಳೊಳಗಾಗಿ ದುರಸ್ತಿಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮಸಗೋಡು, ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಎಚ್ಚರಿಸಿದೆ.

ಅರೆಯೂರು, ಹೊಸಳ್ಳಿ ಕಣಿವೆ ಮಾರ್ಗದ 18 ಕಿಲೋಮೀಟರ್ ರಸ್ತೆ 10 ವರ್ಷದಿಂದ ಗುಂಡಿಮಯವಾಗಿದ್ದು ವಾಹನ ಸಂಚಾ ರಕ್ಕೆ ತೊಂದರೆಯಾಗಿದೆ. ಶಾಲಾ ವಾಹನಗಳು, ಬಾಡಿಗೆ ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ ಎಂದು ಸಮಿತಿ ಆಧ್ಯಕ್ಷ ಎಸ್.ಎನ್.ಅನಂತ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಿಂದೆ 5 ಖಾಸಗಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಗ್ರಾಮೀಣ ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಕಳೆದ ಐದಾರು ವರ್ಷದಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟ ವಾಗಿದೆ ಎಂದು ಹೇಳಿದರು.ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಎರಡರಿಂದ ಮೂರು ಕಿಲೋಮೀಟರ್ ನಡೆದುಕೊಂಡೇ ಶಾಲೆಗೆ ಹೋಗ ಬೇಕು. ಈ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು, 5 ಗಿರಿಜನ ಹಾಡಿಗಳಿವೆ. 10 ಗ್ರಾಮಗಳು ಈ ರಸ್ತೆಯನ್ನು ಅವಲಂಬಿಸಿವೆ. ಹಲವು ಬಾರಿ ಶಾಸಕರು, ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಭರವಸೆ ಕೊಡುವುದನ್ನು ಬಿಟ್ಟರೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ದೂರಿದರು.

ಗ್ರಾಮ ವ್ಯಾಪ್ತಿಯಲ್ಲಿ ಗಣಿಗಾರಿಕೆಗಳು ನಡೆಯುತ್ತಿವೆ. ಅಧಿಕ ಸಾಮರ್ಥ್ಯದ ಕಲ್ಲುಗಳನ್ನು ಟಿಪ್ಪರ್‌ಗಳಲ್ಲಿ ಸಾಗಿಸುತ್ತಿರುವುದರಿಂದ ರಸ್ತೆ ಇನ್ನಷ್ಟು ಹದಗೆಟ್ಟಿದೆ. ಗಣಿ ಮಾಲೀಕರಿಂದ ವಾರ್ಷಿಕ 100 ಕೋಟಿ ರೂ. ರಾಜಧನ ಪಡೆಯುವ ಸರ್ಕಾರಕ್ಕೆ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲವೇ ? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಜಿಲ್ಲಾಧಿಕಾರಿ ಈ ಭಾಗದಲ್ಲಿ ಗ್ರಾಮ ವಾಸ್ತವ್ಯ ನಡೆಸಲಿ. ಆಗ ಸಮಸ್ಯೆ ಅರಿವಿಗೆ ಬರಲಿದೆ ಎಂದು ಹೇಳಿದರು.

ಅಹೋರಾತ್ರಿ ಧರಣಿಗೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಗ್ರಾಮಸ್ಥರು ಪಕ್ಷಾತೀತವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಹೇಳಿದರು. ಹೋರಾಟ ಸಮಿತಿಯ ಟಿ.ಕೆ.ಲೋಕಾನಂದ, ಎಚ್.ಕೆ. ಲೋಕೇಶ್, ಎಸ್.ಆರ್. ಅರುಣ್‌ರಾವ್, ಎ.ಎಚ್. ತಿಮ್ಮಯ್ಯ ಇದ್ದರು