ಹೊಸನಗರ: ಮೇಲಿನಬೆಸಿಗೆ ಗ್ರಾಪಂ ವ್ಯಾಪ್ತಿಯ ಗೊರದಳ್ಳಿಯಿಂದ ಗೊರಗೋಡು ಲೋಕೋಪಯೋಗಿ ರಸ್ತೆ ಶಿಥಿಲಗೊಂಡಿದ್ದು ಅಭಿವೃದ್ಧಿಗೊಳಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಗೊರದಳ್ಳಿ ಗ್ರಾಮಸ್ಥರು ದೂರಿದರು.
ಸೋಮವಾರ ತಾಲೂಕು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಾಪಂ ಅಧಿಕಾರಿಗೆ ಮನವಿ ಸಲ್ಲಿಸಿದರು. ಗೊರದಳ್ಳಿ ಭಾಗದಲ್ಲಿ 66 ಕುಟುಂಬಗಳು, 200ಕ್ಕ್ಕೂ ಹೆಚ್ಚು ಮತದಾರರಿದ್ದಾರೆ. ಗೊರಗೋಡು ಮಾರ್ಗವೇ ಪ್ರಮುಖವಾಗಿದೆ. ರಸ್ತೆ ಮಧ್ಯೆ ಪೈಪ್ ಅಳವಡಿಸದೆ ರಸ್ತೆಯ ಮೇಲೆ ನೀರು ಹರಿಯುವುದರಿಂದ ಓಡಾಡಲು ಹರಸಾಹಸ ಪಡುವಂತಾಗಿದೆ. ಈ ಬಗ್ಗೆ ಸಚಿವರು, ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಗ್ರಾಪಂ ಚರಂಡಿ ಮಣ್ಣನ್ನು ರಸ್ತೆಗೆ ಹಾಕಿ, ಹೆಸರಿಗಷ್ಟೇ ಕಾಮಗಾರಿ ಮಾಡಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳು, ವಯೋವೃದ್ಧರು, ರೋಗಿಗಳು ಪರದಾಡುವಂತಾಗಿದೆ. ಚುನಾವಣೆಯೊಳಗೆ ರಸ್ತೆ ದುರಸ್ತಿಗೊಳಿಸದಿದ್ದರೆ ಮತ ಚಲಾಯಿಸುವುದಿಲ್ಲ. ಯಾವ ಪಕ್ಷದವರೂ ಮತ ಕೇಳಲು ಗ್ರಾಮಕ್ಕೆ ಬರಬಾರದು. ಮೊದಲು ಮೂಲ ಸೌಕರ್ಯ ಸರಿಪಡಿಸಿ ನಂತರ ಗ್ರಾಮಕ್ಕೆ ಕಾಲಿಡಲಿ ಎಂದು ತಾಕೀತು ಮಾಡಿದರು.