ಜಿಲ್ಲೆ

ರಸ್ತೆ ದುರಸ್ತಿಗೆ ಗ್ರಾಮಸ್ಥರ ಪ್ರತಿಭಟನೆ

ಹಗರೆ: ಮಾದೀಹಳ್ಳಿ ಹೋಬಳಿಯ ಕ್ಯಾತನಕೇರೆ-ಸಂಕೇನಹಳ್ಳಿ ರಸ್ತೆ ಮಾರ್ಗದ ಕೋಮಾರನಹಳ್ಳಿಯಿಂದ ಮಲ್ಲಾಪುರದವರೆಗಿನ 3 ಕಿಮೀ ರಸ್ತೆ ಗುಂಡಿಮಯವಾಗಿದ್ದು, ಕೂಡಲೇ ಗುಂಡಿಗಳನ್ನು ಮುಚ್ಚಿಸುವಂತೆ ಕೋಮಾರನಹಳ್ಳಿ ಹಾಗೂ ಸಾವಾಸಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ಕೋಮಾರನಹಳ್ಳಿ ರಸ್ತೆಯಲ್ಲಿ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು ಶಾಸಕರು, ಅಧಿಕಾರಿಗಳು ಹಾಗೂ ಗಣಿ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿದರು.


ಸವಾಸಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್‌ಗೌಡ ಮಾತನಾಡಿ, ಅಡಗೂರಿಂದ ಬೇಲೂರಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು, ಮಧ್ಯದಲ್ಲಿ ಮೂರು ಕಿಮೀ ರಸ್ತೆ ರಸ್ತೆ ತುಂಬೆಲ್ಲ ನಾಲ್ಕೈದು ಅಡಿ ಗುಂಡಿ ಬಿದ್ದು, ಕೆಸರು ಗದ್ದೆಯಂತಾಗಿದೆ. ಇದರಿಂದ ಬಸ್ ಸಹ ಬಾರದಂತಾಗಿದ್ದು, ವಯೋವೃದ್ಧರು ಹಾಗೂ ವಿದ್ಯಾರ್ಥಿಗಳು ಸಹ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.


ಅಕ್ರಮ ಗಣಿಗಾರಿಕೆಯಿಂದ ಪ್ರತಿನಿತ್ಯ ಅಕ್ರಮವಾಗಿ 60 ರಿಂದ 70 ಟನ್ ತೂಕದ ಕಲ್ಲನ್ನು ಲಾರಿ ಮತ್ತು ಟ್ರಾೃಕ್ಟರ್‌ನಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ರಸ್ತೆ ತೀರ ಹದಗೆಟ್ಟಿದೆ. ಈ ವಿಷಯವನ್ನು ಗಣಿಗಾರಿಕೆ ಅಧಿಕಾರಿಗಳಿಗೆ ತಿಳಿಸಿ,ಲಾರಿಗಳ ಸಂಚಾರ ತಡೆಯಲು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅಕ್ರಮ ಗಣಿಗಾರಿಕೆಯಿಂದ ಮನೆಗಳಿಗೂ ಸಹ ಹಾನಿಗಳಾಗಿವೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.


ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋಮಾರನಹಳ್ಳಿ ಕುಮಾರ್, ವಾಹನ ಸವಾರರು, ತಮ್ಮ ಫಸಲು ಸಾಗಿಲು ರೈತರು ಈ ರಸ್ತೆಯಲ್ಲಿ ಹರಸಾಹಸ ಪಡುವಂತಾಗಿದೆ. ಶಾಸಕರಲ್ಲಿ ಮನವಿ ಸಲ್ಲಿಸಿದರೆ ಎರಡು ಕೋಟಿ ರೂ. ವೆಚ್ಚದಲ್ಲಿ ರಸ್ತೆಯಾಗುತ್ತದೆ ಎನ್ನುತ್ತಾರೆ. ಅತಿಯಾದ ಭಾರ ಹೊತ್ತ ಲಾರಿಗಳು ಈ ರಸ್ತೆಯಲ್ಲಿ ಚಲಿಸುವುದು ಮೊದಲು ನಿಲ್ಲಬೇಕು. ಅಕ್ರಮ ಗಣಿಗಾರಿಕೆಯಿಂದ ರಸ್ತೆ ಹಾಳಾಗಿದೆ ಎಂದರು.

ಸವಾಸಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ಜಗದೀಶ್, ಮಲ್ಲೇಶ್, ಕೋಮಾರನಹಳ್ಳಿ ಗ್ರಾಮಸ್ಥರಾದ ನಾಗರಾಜ್, ಸರ್ವಮಂಗಳಾ, ಟೈಲರ್ ಜಗದೀಶ್, ಮಲ್ಲಿಕಾರ್ಜುನ ಇನ್ನಿತರರು ಇದ್ದರು.