ಕಿಕ್ಕೇರಿ: ರಸ್ತೆ ಡಾಂಬರೀಕರಣ ನೆಪದಲ್ಲಿ ಅರ್ಧ ವರ್ಷ ಕಳೆದರೂ ಕಾಮಗಾರಿ ಮಾಡದ ಅಧಿಕಾರಿ, ಗುತ್ತಿಗೆದಾರರ ವರ್ತನೆಗೆ ಬೇಸತ್ತ ಸಾಸಲು ಗ್ರಾಮಸ್ಥರು ಕರವೇ ಹಾಗೂ ಅಂಬೇಡ್ಕರ್ ಯುವಕ ಸಂಘದೊಂದಿಗೆ ಬೀದಿಗಿಳಿದು ಗುರುವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ ಕಿಕ್ಕೇರಿಯಿಂದ ಶ್ರವಣಬೆಳಗೊಳಕ್ಕೆ ಹಾದು ಹೋಗುವ ಸಾಸಲು ಗ್ರಾಮದಲ್ಲಿ ರಸ್ತೆ ಅಗೆದು ಕಾಮಗಾರಿ ಮಾಡದೆ ರಸ್ತೆಗೆ ಜಲ್ಲಿ, ಜಲ್ಲಿಪುಡಿ ಹಾಕಿದ್ದರು. ಸುಮಾರು 250ಮೀ. ರಸ್ತೆ ಅಗೆದ ಕಾರಣ ಸಣ್ಣವಾಹನ ಓಡಾಡಿದರೂ ಧೂಳು ಮನೆಗಳಿಗೆ, ಪಕ್ಕದಲ್ಲಿಯೇ ಇರುವ ಶಾಲೆಗೆ ಆವರಿಸುತ್ತಿದೆ. ಪರಿಣಾಮ ಆರೋಗ್ಯ ಸಮಸ್ಯೆ, ಹೆಚ್ಚಾಗಿದೆ. ಕಳೆದ ತಿಂಗಳು ರಸ್ತೆ ದುರಸ್ತಿಗಾಗಿ ಶಾಲಾ ಮಕ್ಕಳು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಆದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಮಹಿಳಾ ಸಂಘದೊಡಗೂಡಿ ರಸ್ತೆಗೆ ಅಡ್ಡಲಾಗಿ ಮರದ ದಿಮ್ಮಿ, ಗಿಡಗಂಟಿಗಳನ್ನು ಅಡ್ಡಲಾಗಿ ಇಟ್ಟು ಪ್ರತಿಭಟನೆಗೆ ಮುಂದಾದರು. ರಸೆಕಾಮಗಾರಿ ಆರಂಭಿಸುವವರೆಗೆ ಜಾಗಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ರಸ್ತೆಯಲ್ಲಿಯೇ ಕುಳಿತು ಘೋಷಣೆ ಕೂಗಿದರು. ಪರಿಣಾಮ ವಾಹನಗಳು ಓಡಾಡಲು ಪರದಾಡುವಂತಾಯಿತು. ಸ್ಥಳಕ್ಕೆ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್, ಲೋಕೋಪಯೋಗಿ ಎಇಇ ರಾಜಶೇಖರ್, ಜೆಇ ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ ನಾಳೆಯಿಂದ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಕರವೇ ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ, ಅಂಬೇಡ್ಕರ್ ಯುವಕ ಸಂಘದ ಸದಸ್ಯರಾದ ಮಹೇಶ್, ನವೀನ, ಲಿಂಗರಾಜು, ದೀಪಕ್, ಪ್ರಸನ್ನ, ಗಂಗಮ್ಮ, ಮಂಜುಳಾ, ತಾಯಮ್ಮ, ಶಿವಮ್ಮ, ಚಿನ್ನಮ್ಮ, ಚಿಕ್ಕತಾಯಮ್ಮ, ವಿಜಯಾ ಹಾಜರಿದ್ದರು.