ಹನೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಶಾಗ್ಯ ಗ್ರಾಮದ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಸೋಮವಾರ ಜೆಸಿಬಿ ಸಹಾಯದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮದ ರಸ್ತೆಯ ಗುಂಡಿಗಳನ್ನು ಮುಚ್ಚಿ, ಸಮತಟ್ಟು ಮಾಡುವ ಮೂಲಕ ರಸ್ತೆಗೆ ಕಾಯಕಲ್ಪ ನೀಡಿದ್ದಾರೆ.
ಪಟ್ಟಣದಿಂದ ಶಾಗ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು 18 ಕಿ.ಮೀ. ಅಂತರವನ್ನು ಹೊಂದಿದ್ದು, ಮಣಗಳ್ಳಿ, ಬಂಡಳ್ಳಿ ಶಾಗ್ಯ ಹಾಗೂ ಈ ಭಾಗದ ಸುಮಾರು 35ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಈ ರಸ್ತೆಯು ಹಲವು ವರ್ಷಗಳಿಂದ ತೀರಾ ಹದಗೆಟ್ಟಿದ್ದು, ಬಹುತೇಕ ಕಡೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ.
ಇದರಿಂದ ಈ ಮಾರ್ಗದಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ಒಂದು ತ್ರಾಸದಾಯಕ ಕೆಲಸವಾಗಿದೆ. ಆದರೆ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳಾಲಿ ಹಾಗೂ ಅಧಿಕಾರಿಗಳಾಗಲಿ ಮುಂದಾಗಿಲ್ಲ. ಇದರ ಪರಿಣಾಮ ಈ ಮಾರ್ಗದಲ್ಲಿ ಅಪಘಾತ ಸಂಭವಿಸಿ ಸಾವು ನೋವುಗಳು ಉಂಟಾಗಿದೆ. ಜತೆಗೆ ಆಸ್ಪತ್ರೆಗೆ ಕರೆತರುವ ವೇಳೆ ಮಾರ್ಗಮಧ್ಯೆಯೇ ಹೆರಿಗೆಯಾಗಿರುವ ಘಟನೆಗಳು ಸಹ ನಡೆದಿದೆ.
ಇದರಿಂದ ಬೇಸತ್ತ ಈ ಭಾಗದ ಜನರು ಕಳೆದ ವರ್ಷ ಗುಂಡಿಗಳಿಗೆ ಮಣ್ಣು ಹಾಕಿ ಸಮತಟ್ಟು ಮಾಡುವುದರ ಮೂಲಕ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ರಸ್ತೆಯ ಅವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲೂ ದೃಶ್ಯವನ್ನು ಹರಿಬಿಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದೀಗ ಗುಂಡಿಗಳು ಮತ್ತೆ ಬಾಯ್ತೆರೆದುಕೊಂಡಿದ್ದು, ವಾಹನಗಳ ಸಂಚಾರಕ್ಕೆ ತುಂಬ ಸಮಸ್ಯೆಯಾಗಿ ಪರಿಣಮಿಸಿತ್ತು. ಹಾಗಾಗಿ ಶಾಗ್ಯ ಗ್ರಾಮದಲ್ಲಿ 13 ವರ್ಷಕ್ಕೊಮ್ಮೆ ಆಚರಿಸುವ ಮಾರಮ್ಮನ ಜಾತ್ರೆ ಹಿನ್ನೆಲೆ ಗ್ರಾಮಕ್ಕೆ ಆಗಮಿಸುವ ನೆಂಟರಿಷ್ಟರು, ಬಂಧು ಬಳಗಕ್ಕೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಉದ್ದೇಶದಿಂದ ಶಾಗ್ಯ ಗ್ರಾಮಸ್ಥರೇ ಗುಂಡಿಗಳಿಗೆ ಜೆಸಿಬಿ ಮೂಲಕ ಮಣ್ಣು ಹಾಕಿ ಸಮತಟ್ಟು ಮಾಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.