ಜಿಲ್ಲೆ

ರಸ್ತೆ-ತಿಪ್ಪೆಯಲ್ಲಿ ಕಸ ಹಾಕದಿರಿ

ಕಂಪ್ಲಿ: ಕಸಮುಕ್ತ, ಸ್ವಚ್ಛ ಸುಂದರ ಪಟ್ಟಣವಾಗಿಸಲು ಸಾರ್ವಜನಿಕರು ಪುರಸಭೆ ಸಿಬ್ಬಂದಿಯೊಂದಿಗೆ ಕೈಜೋಡಿಸುವಂತೆ ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.

ಪುರಸಭೆ ಮುಂಭಾಗದಲ್ಲಿ, ಸಾಮಾಜಿಕ ಜಾಲತಾಣಗಳ ಅನಾವರಣ-ಕಸ ಕಂಡರೆ ಪೋಟೋ ಕಳುಹಿಸಿ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಜನತೆ ತಿಪ್ಪೆಗಳಲ್ಲಿ ಕಸ ಹಾಕುವುದನ್ನು ನಿಷೇಧಿಸಿದೆ. ಯಾರೂ ರಸ್ತೆ, ತಿಪ್ಪೆ, ಕಂಡಕಂಡಲ್ಲಿ ಕಸ ಹಾಕಬಾರದು. ಮನೆಮನೆಗೆ ಬರುವ ಕಸದ ವಾಹನದಲ್ಲೇ ನಿತ್ಯ ಕಸ ಹಾಕಬೇಕು ಎಂದರು.

ಸ್ವ ಸಹಾಯ ಗುಂಪಿನ ಸಮುದಾಯ ತರಬೇತುಗಾರ್ತಿ ಜಾನಕಿ ಮಾತನಾಡಿ, ಕಸ ಕಂಡರೆ 96112 26509 ಕ್ಕೆ ಪೋಟೊ ಕಳುಹಿಸಿ. ಸಾರ್ವಜನಿಕರು ಕಸವಿರುವ ಜಾಗದ ಪೋಟೊ ತೆಗೆದು ಸಹಾಯವಾಣಿ ಸಂಖ್ಯೆಗೆ ಕಳುಹಿಸಿದಲ್ಲಿ 48 ಗಂಟೆಯಲ್ಲಿ ಕಸ ವಿಲೇವಾರಿ ಮಾಡಲಾಗುವುದು. ಎಲ್ಲೆಂದರಲ್ಲೆ ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎಂದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯ ಲಡ್ಡು ಹೊನ್ನೂರವಲಿ, ಮುಖಂಡ ಜಿ.ಸುಧಾಕರ, ಪರಿಸರ ಅಭಿಯಂತರ ಶರಣಪ್ಪ, ಆರ್‌ಐ ಭರಮಪ್ಪ, ಆರೋಗ್ಯ ನಿರೀಕ್ಷಕರಾದ ಪ್ರಕಾಶಬಾಬು, ಜೀವನ್ ಸ್ವಾತಿ, ಜ್ಯೋತಿ, ಸಮುದಾಯ ತರಬೇತುದಾರರಾದ ನಾಗರತ್ನಾ, ಭೂಮಿಕಾ, ತಿಪ್ಪಮ್ಮ ಇತರರಿದ್ದರು.