ಜಿಲ್ಲೆ

ರಸ್ತೆ ಗುಂಡಿಯಲ್ಲಿ ನೆಟ್ಟ ಸಸಿ!

ಬೀದರ್: ನಗರದ ಹೃದಯಭಾಗವಾದ ಬೊಮ್ಮಗೊಂಡೇಶ್ವರ ವೃತ್ತದ ಹತ್ತಿರ ರಸ್ತೆ ಮೇಲೆ ಬಿದ್ದ ಗುಂಡಿಯಲ್ಲಿ ಸಸಿ ನೆಟ್ಟು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಗುಂಡಿ ಮುಚ್ಚಿ ಎಂದು ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಸ್ಪಂದನೆ ಸಿಗದ ಕಾರಣ, ಗುಂಡಿಯೊಳಗೆ ಸಸಿ ನೆಟ್ಟು ಹೋರಾಟ ನಡೆಸಲಾಗಿದೆ ಎಂದು ವೇದಿಕೆಯ ಭಾಲ್ಕಿ ತಾಲೂಕು ಅಧ್ಯಕ್ಷ ಗಣೇಶ ಪಾಟೀಲ್ ತಿಳಿಸಿದ್ದಾರೆ.

ಮನ್ನಳ್ಳಿ ಹಾಗೂ ಚಿದ್ರಿ ರಸ್ತೆಗೆ ಸಂಪರ್ಕಿಸುವ ಮುಖ್ಯ ಮಾರ್ಗ ಇದಾಗಿದೆ. ಇಲ್ಲಿ ರಸ್ತೆ ಮಧ್ಯೆ ದೊಡ್ಡ ಗುಂಡಿ ಬಿದ್ದು ಹಲವು ದಿನಗಳಾಗಿದೆ. ಅನೇಕರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಆದರೆ ನಗರಾಡಳಿತ ಈ ಕಡೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ನಗರದ ವಿವಿಧ ರಸ್ತೆಗಳ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಬೇಕು. ನಿರ್ಲಕ್ಷೃ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರಮುಖರಾದ ಸಂಜು ಯಾದವ್, ಗೋಪಾಲ್ ಕುಲಕರ್ಣಿ, ದಿಲೀಪ ದೊಡ್ಡಮನಿ, ಖಂಡಪ್ಪ ಪಾತರಪಳ್ಳಿ, ಗಿರೀಶ್ ಬಿರಾದಾರ, ಕಿರಣ ಪಾಟೀಲ್, ಮಾರುತಿ ಹಾರಕೂಡೆ, ಅಪ್ಪು ಬಿರಾದಾರ, ಅಮರ ಚಂದೆ ಇತರರಿದ್ದರು.