ನವೀನ್ ಚಂದ್ರ ಶೆಟ್ಟಿ ಆನೇಕಲ್
ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಗಲೆಂದು ವಿಸ್ತಾರವಾದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಆದರೆ, ಈ ಭಾಗದಲ್ಲಿ ರಸ್ತೆಗಳಲ್ಲಿ ನಿರ್ಮಾಣವಾದ ಗುಂಡಿಗಳು ಮೃತ್ಯುಕೂಪಗಳಾಗುತ್ತಿವೆ. ರಸ್ತೆ ದುರಸ್ತಿಗೊಳಿಸಿರುವುದು ಇರಲಿ, ಕನಿಷ್ಠ ಗುಂಡಿಯನ್ನೂ ಮುಚ್ಚಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿರುವುದರಿಂದ, ಅಮಾಯಕರ ಸಾವಿನ ಸರಣಿ ಕೊನೆ ಇಲ್ಲದಂತಾಗಿದೆ.
ಗುಂಡಿ ತಪ್ಪಿಸಲು ಹೋದ ಬೈಕ್ ಸವಾರನಿಗೆ ಹಿಂದಿನಿಂದ ವಾಹನ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿದ್ದಾರೆ. ಶಾಲಾ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ವೃದ್ಧರೊಬ್ಬರು ಸತ್ತಿದ್ದಾರೆ. ಗುಂಡಿಗಳಿಂದಾಗಿ ಆಯತಪ್ಪಿ ಬಿದ್ದ ಸವಾರರು ಕೈಕಾಲು ಮುರಿದುಕೊಂಡಿದ್ದಕ್ಕೆ ಲೆಕ್ಕವೇ ಇಲ್ಲದಾಗಿದೆ. ಇಂಥ ಘಟನೆಗಳು ಇಲ್ಲದೆ ದಿನಗಳೇ ಮುಗಿಯುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಆನೇಕಲ್ ಥಳಿ ರಸ್ತೆ: ಆನೇಕಲ್-ಥಳಿ ರಸ್ತೆಯನ್ನು ವಿಸ್ತರಣೆ ಮಾಡುವುದಾಗಿ ಕಾಲಕಾಲಕ್ಕೆ ಆಯ್ಕೆಯಾಗುವ ಶಾಸಕರು 20 ವರ್ಷಗಳಿಂದಲೂ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಈವರೆಗೂ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿಲ್ಲ. ಈಗಿರುವ ರಸ್ತೆಯ ದುರಸ್ತಿ ಇರಲಿ, ಗುಂಡಿ ಮುಚ್ಚುವ ಕನಿಷ್ಠ ಸೌಜನ್ಯವನ್ನೂ ಯಾರೊಬ್ಬರೂ ತೋರುತ್ತಿಲ್ಲ. ಇದರಿಂದಾಗಿ ಈ ರಸ್ತೆಯಲ್ಲಿ ಅಪಘಾತಗಳ ಸರಣಿ ಮುಂದುವರಿಯುತ್ತಲೇ ಇದೆ.
ಅತ್ತಿಬೆಲೆ-ಸರ್ಜಾಪುರ ರಸ್ತೆ: ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನಗಳ ಸಂಚಾರಕ್ಕೆ ಭಾರಿ ತೊಡಕು ಉಂಟಾಗುತ್ತಿದೆ. ಸ್ವಲ್ಪ ಮಳೆಯಾದರೂ ಸಾಕು. ನೀರು ಗುಂಡಿಯಲ್ಲಿದೆಯೋ ಅಥವಾ ರಸ್ತೆ ನೀರಿನಲ್ಲಿದೆಯೋ ಎಂಬುದೇ ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ.
ಶಾಲಾ ಮಕ್ಕಳ ಸ್ಥಿತಿ ಹೇಳುವಂತಿಲ್ಲ: ಅತ್ತಿಬೆಲೆ-ಸರ್ಜಾಪುರ ರಸ್ತೆಯಲ್ಲಿ ಸಾಲು ಸಾಲು ಶಾಲೆಗಳಿವೆ. ಪಾಲಕರು ಮಕ್ಕಳನ್ನು ಶಾಲೆಗೆ ಬಿಡಲು-ಕರೆದುಕೊಂಡು ಹೋಗಲು ದ್ವಿಚಕ್ರವಾಹನಗಳಲ್ಲಿ ಬರುತ್ತಾರೆ. ಜತೆಗೆ ಶಾಲೆಯ ವಾಹನಗಳೂ ಸಂಚರಿಸುತ್ತವೆ. ಆದರೆ, ಗುಂಡಿಯಿಂದಾಗಿ ಅಪಾಯಕಾರಿ ಸ್ಥಿತಿಯಲ್ಲಿ, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಸ್ಥಿತಿ ಇದೆ.
ಚಂದಾಪುರ-ದೊಮ್ಮಸಂದ್ರ ರಸ್ತೆ: ಚಂದಾಪುರ-ದೊಮ್ಮಸಂದ್ರ ರಸ್ತೆಯಲ್ಲಿರುವ ಹೀಲಲಿಗೆ ರೈಲ್ವೆ ನಿಲ್ದಾಣದ ಬಳಿ ಮಂಡಿ ಉದ್ದದ ಹೊಂಡ ನಿರ್ಮಾಣವಾಗಿದೆ. ಮಾರುಕಟ್ಟೆಗೆ ಹೋಗಿ ಬರಲು ಸುತ್ತಮುತ್ತಲ ಗ್ರಾಮಗಳ ರೈತರಿಗೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಸರಕು ಸಾಗಣೆ ಮಾಡುವಾಗ ಅಪಘಾತಗಳಾಗಿ ಹಲವು ಪ್ರಾಣ ಕಳೆದುಕೊಂಡಿದ್ದಾರೆ.
ಆನೇಕಲ್-ಜಿಗಣಿ ರಸ್ತೆ: ಪ್ರತಿಷ್ಠಿತ ಕೈಗಾರಿಕಾ ಪ್ರದೇಶ ಜಿಗಣಿಗೆ ಸಂಪರ್ಕ ಕಲ್ಪಿಸುವ ಆನೇಕಲ್-ಜಿಗಣಿ ರಸ್ತೆಯ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿದೆ. ಈ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಮೂರು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಶೇ.30 ಕೂಡ ಮುಗಿದಿಲ್ಲ. ರಸ್ತೆ ಅಭಿವೃದ್ಧಿ ವಿಷಯದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅತ್ತಿಬೆಲೆಯಿಂದ ತಮಿಳುನಾಡಿನ ಗಡಿಗೆ ಹೋಗಿಬರಲು ನರಕಯಾತನೆ ಅನುಭವಿಸಬೇಕಾಗುತ್ತದೆ. ಮಳೆ ಬಂದಾಗ ಅದೆಷ್ಟೋ ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಳ್ಳುತ್ತಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವುದೇ ನಮಗೆ ದೊಡ್ಡ ಕೆಲಸವಾಗಿದೆ. ನಾಗರಾಜು, ಸ್ಥಳೀಯ ನಿವಾಸಿ ರಾಜ್ಯದ ಗಡಿ ಸೋಲೂರು ಮೂಲಕ ತಮಿಳುನಾಡಿಗೆ ಹೋಗುವ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿ 2 ವರ್ಷಗಳಾಗಿವೆ. ಆದರೂ ಕಾಮಗಾರಿ ಮುಗಿದಿಲ್ಲ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಿಗೆ ಜಾಣಕಿವುಡು ಆವರಿಸಿದೆ. ಇಂಥ ವ್ಯವಸ್ಥೆಯಲ್ಲಿ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಸೋಲೂರು ಮಂಜು, ಸ್ಥಳೀಯ ನಿವಾಸಿ ಕೆಲವೊಂದು ರಸ್ತೆಗಳಲ್ಲಿ ಗುಂಡಿ ನಿರ್ಮಾಣವಾಗಿದ್ದು, ಅವುಗಳನ್ನು ಹಂತಹಂತವಾಗಿ ಮುಚ್ಚುವ ಕೆಲಸ ಮಾಡಲಾಗುವುದು, ಟೆಂಡರ್ ಆದ ರಸ್ತೆಗಳ ಕಾಮಗಾರಿ ಕೂಡ ಮಳೆ ಕಡಿಮೆಯಾದ ತಕ್ಷಣ ಪ್ರಾರಂಭವಾಗಲಿದೆ. ಬಸವರಾಜು, ಎಇಇ, ಲೋಕೋಪಯೋಗಿ ಇಲಾಖೆ ಆನೇಕಲ್