ಬೇಲೂರು: ಮಲೆನಾಡು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗಿದ್ದರೂ ಸಹ ವಿರೋಧ ಪಕ್ಷದವರು ಕೇವ ಪ್ರಚಾರಕ್ಕಾಗಿ ಕೆಲಸಗಳಾಗಿಲ್ಲ ಎಂದು ಅಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಆರೋಪಿಸಿದರು.
ತಾಲೂಕಿನ ನವಿಲಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ, ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ, ಎತ್ತಿನಹೊಳೆ ಯೋಜನೆಯಿಂದ ಜಾವಗಲ್, ಹಳೇಬೀಡು, ಮಾದಿಹಳ್ಳಿ ಹೋಬಳಿಗಳಲ್ಲಿ ಹೆಚ್ಚಿನ ಕೆಲಸಗಳಾಗಿವೆ ಅಷ್ಟೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಅನುದಾನವನ್ನು ಬಿಜೆಪಿ ಸರ್ಕಾರ ವಾಪಾಸ್ ಪಡೆದಿದ್ದರಿಂದ ಹೆಚ್ಚಿನ ಕೆಲಸಗಳನ್ನು ಮಾಡಿಸಲಾಗಲಿಲ್ಲ, ಆದರೂ ಸಹ ಹಂತ ಹಂತವಾಗಿ 1800 ಕೋಟಿ ರೂ, ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿಸಿದ್ದೇನೆ. ಇದರ ಜತೆಗೆ ಸೋಂಪುರ ರಸ್ತೆ, ದೇವರಾಜಪುರ ರಸ್ತೆ, ಹಿರಿಗದ್ದೆ ರಸ್ತೆ, ಕುಪ್ಪಗುಡ್ಡ ರಸ್ತೆ, ನಾಗೇನಹಳ್ಳಿ ರಸ್ತೆ, ಕಣದೂರು ರಸ್ತೆ, ಎನ್,ನಿಡಗೋಡು ಗ್ರಾಮದ ಹೊಸಪೇಟೆಯಮ್ಮ ದೇವಸ್ಥಾನ ರಸ್ತೆ ಕಾಮಗಾರಿಗಳಿಗೆ ಭೂಮಿ ನೇರವೇರಿಸಲಾಗಿದ್ದು ಶ್ರೀಘ್ರದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜು, ಗ್ರಾಮದ ಕುಮಾರ್ ಸೇರಿದಂತೆ ಇತರರಿದ್ದರು.