ಜಿಲ್ಲೆ

ರಸ್ತೆ ಕಾಮಗಾರಿ ವೇಳೆ ಒಡೆದ ಪೈಪ್, ದುರಸ್ತಿಗೆ ಆಗ್ರಹಿಸಿ ಸಖರಾಯಪಟ್ಟಣ ಗ್ರಾಮಸ್ಥರಿಂದ ಪ್ರತಿಭಟನೆ


ಕಡೂರು: ರಸ್ತೆ ಕಾಮಗಾರಿ ವೇಳೆ ನೀರಿನ ಪೈಪ್​ಗಳು ಒಡೆದು ಸಖರಾಯಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ತಕ್ಷಣ ಪೈಪ್​ಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಸಖರಾಯಪಟ್ಟಣ ಬಸ್ ನಿಲ್ದಾಣದ ಸಮೀಪ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮುಖಂಡ ಹಳೇಹಟ್ಟಿ ಆನಂದ ನಾಯ್ಕ ಮಾತನಾಡಿ, ಕೆ.ಎಂ.ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ನಂತರ ಕಡೂರಿನಿಂದ ಸಖರಾಯಪಟ್ಟಣದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆದಿದೆ. ರಸ್ತೆ ಕಾಮಗಾರಿ ಮಾಡುವಾಗ ಸಖರಾಯಪಟ್ಟಣ ಮತ್ತು ಅದಕ್ಕೆ ಹೊಂದಿಕೊಂಡ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪ್​ಲೈನ್ ಸಂಪೂರ್ಣ ಒಡೆದು ಹೋಗಿದೆ. ಕೆಲವು ಸಂಪರ್ಕ ರಸ್ತೆಗಳು ಮುಚ್ಚಿವೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಧಿಕಾರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿ ನಡೆಯುವ ವೇಳೆ ಇಂಜಿನಿಯರ್​ಗಳು ಸ್ಥಳದಲ್ಲಿ ಇರುವುದಿಲ್ಲ. ಮನಬಂದಂತೆ ಕಾಮಗಾರಿ ನಡೆಸಲಾಗುತ್ತಿದೆ. ನಮಗೆ ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ನೆಪದಲ್ಲಿ ಅಗತ್ಯ ಮೂಲ ಸೌಲಭ್ಯ ನಾಶಪಡಿಸುವುದು ಸರಿಯಲ್ಲ. ಕೂಡಲೇ ಪೈಪ್​ಲೈನ್​ಗಳು ಮತ್ತು ಸಂಪರ್ಕ ರಸ್ತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಡೆಸುವುದಾಗಿ ಪಟ್ಟುಹಿಡಿದು ರಸ್ತೆ ತಡೆ ನಡೆಸಿದರು. ನಂತರ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಹೆದ್ದಾರಿ ಪ್ರಾಧಿಕಾರದ ಎಇಇ ಮುನಿರಾಜು, ಶೀಘ್ರ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.