ತ್ಯಾಗರ್ತಿ: ಹೊಸಂತೆ-ಗೌತಮಪುರ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು ಅಪಘಾತಗಳು ಹೆಚ್ಚಾಗುತ್ತಿವೆ. ಪ್ರಾಣಹಾನಿಗೆ ತಾಲೂಕು ಆಡಳಿತವೆ ಹೊಣೆಯಾಗಿದ್ದು ಕೂಡಲೆ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳದಿದ್ದರೆ ಗ್ರಾಮಸ್ಥರ ಜತೆಗೂಡಿ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಹೊಸಂತೆಯಲ್ಲಿ ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಭಾನುವಾರ ಗ್ರಾಮಸ್ಥರೊಂದಿಗೆ ರಸ್ತೆತಡೆ ನೆಡೆಸಿ ಮಾತನಾಡಿದ ಅವರು, ಹೊಸಂತೆ-ಗೌತಮಪುರ ರಸ್ತೆಯಲ್ಲಿ ಇತ್ತೀಚಿಗೆ ಅನೇಕ ಅಪಘಾತಗಳು ನೆಡೆದು ಪ್ರಾಣಹಾನಿಯಾಗಿದ್ದರೂ ಸರ್ಕಾರಿ ಅಧಿಕಾರಿಗಳು, ಶಾಸಕರು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಪಘಾತ ಸ್ಥಳದ ಬಗ್ಗೆ ವರ್ಷದ ಹಿಂದೆಯೇ ಹಿರೇಬಿಲಗುಂಜಿ ಗ್ರಾಪಂನಿಂದ ಸಂಬಂಧಪಟ್ಟ ಸಚಿವರಿಗೆ, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಸೂಚನಾಫಲಕವನ್ನು ಹಾಕುವ ಸೌಜನ್ಯವನ್ನೂ ತೋರಿಲ್ಲ ಎಂದು ಹೇಳಿದರು.
ತಾಲೂಕಿಗೆ ಸಾವಿರ ಕೋಟಿ ಅನುದಾನ ಬಂದಿದೆ ಎಂದು ಹೇಳುವ ಶಾಸಕರು ಇಲ್ಲಿನ ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿಗೆ ಯಾವುದೇ ಆದ್ಯತೆ ನೀಡಿಲ್ಲ. ಕಳೆದ 5 ವರ್ಷಗಳ ಹಿಂದೆ ಹೇಗಿತ್ತೋ, ಈಗಲೂ ಅದೇ ರೀತಿ ಇದೆ. ಒಂದು ತಿಂಗಳಿನಲ್ಲಿ ಈ ರಸ್ತೆಯ ಅಭಿವೃದ್ಧಿ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಶಿವಣ್ಣ ಆಗಮಿಸಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.