ಜಿಲ್ಲೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿನ ಕೊಡಗು ಜಿಲ್ಲಾ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಚಾಲನೆ ನೀಡಿದರು.

ವೀರನಹೊಸಳ್ಳಿ ಗೇಟ್‌ನಿಂದ ನಾಗರಹೊಳೆ ಉದ್ಯಾನದೊಳಗಿನ ಮೂರ್ಕಲ್‌ವರೆಗಿನ 7 ಕಿ.ಮೀ ಹಾಗೂ ವೀರನಹೊಸಳ್ಳಿಗೆ ಸಂಪರ್ಕ ಕಲ್ಪಿಸುವ 2.3 ಕಿ.ಮೀ. ಮುಖ್ಯರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಈ ರಸ್ತೆ ಸೇರಿದಂತೆ ಕಾಡಂಚಿನ ಗ್ರಾಮಗಳ ರಸ್ತೆಗಳು ಹಾಳಾಗಿವೆ. ಬಹು ದಿನಗಳಿಂದ ನಾಗರಹೊಳೆ ಉದ್ಯಾನದೊಳಗಿನ ರಸ್ತೆಯಲ್ಲಿ ವಾಹನ ಸಂಚಾರವಂತೂ ಹೇಳ ತೀರದಾಗಿತ್ತು. ರಸ್ತೆ ಕಾಮಗಾರಿಯನ್ನು ಮಾರ್ಚ್‌ನೊಳಗೆ ಪೂರ್ಣಗೊಳಿಸಬೇಕು ಎಂದು ಇಂಜಿನಿಯರ್ ಪ್ರಭಾಕರ್ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಪಿಡಬ್ಲುೃಡಿ ಎಇಇ ಯು.ಆರ್.ಯತೀಶ್ ಹಾಗೂ ಎಇ ಪ್ರಭಾಕರ್ ಜಿ.ಎಸ್.ರಸ್ತೆ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿ, ನಾಗರಹೊಳೆ ಉದ್ಯಾನದೊಳಗೆ ಸಂಪೂರ್ಣ ಹಾಳಾಗಿರುವ 7 ಕಿ.ಮೀ. ರಸ್ತೆಯನ್ನು ಸಂಪೂರ್ಣ ತೆಗೆದು 3.7 ಮೀಟರ್ ಅಗಲದ ಜಲ್ಲಿ ಹಾಕಿ ವೆಟ್ ಮಿಕ್ಸ್‌ನೊಂದಿಗೆ ಡಾಂಬರೀಕರಣಗೊಳಿಸಲಾಗುವುದು. ಉಳಿದ ನಾಗಾಪುರ ಪುನರ್ವಸತಿ ಕೇಂದ್ರದಿಂದ ವೀರನಹೊಸಳ್ಳಿ ಗೇಟ್‌ವರೆಗಿನ 2.3 ಕಿ.ಮೀ ರಸ್ತೆಯನ್ನು ವಿಸ್ತರಣೆಗೊಳಿಸಿ ಡಾಂಬರ್ ಹಾಕಲಾಗುವುದು ಎಂದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ಕಟ್ಟನಾಯ್ಕ, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಗಣೇಶ್, ಕುಮಾರ್, ಮುಖಂಡರಾದ ರವಿಚಂದ್ರ, ವೆಂಕಟೇಗೌಡ, ಜೆಇ ಕಿರಣ್ ಹಾಗೂ ಗ್ರಾಮಸ್ಥರು ಇದ್ದರು.

ರೈತರ ಮನವಿ

ಕಾಡು ಹಂದಿ, ನವಿಲು, ಜಿಂಕೆಗಳ ಹಾವಳಿ ತಪ್ಪಿಸುವಂತೆ ರೈತರು ಶಾಸಕ ಜಿ.ಡಿ.ಹರೀಶ್‌ಗೌಡ ಅವರಗೆ ಮನವಿ ಸಲ್ಲಿಸಿದರು. ನಾಗರಹೊಳೆ ಉದ್ಯಾನದಂಚಿನಲ್ಲಿ ಕಾಡಂದಿ, ನವಿಲು, ಜಿಂಕೆಗಳ ಹಾವಳಿ ಹೆಚ್ಚಾಗಿ ರಾಗಿ, ಮೆಣಸಿನ ಕಾಯಿ, ಅವರೆಕಾಯಿ ಮತ್ತಿತರ ಬೆಳೆಗಳನ್ನು ತಿಂದು ಹಾಕುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದು ಉದ್ಯಾನದಂಚಿನಲ್ಲಿ ನಿರ್ಮಿಸಿರುವ ರೈಲ್ವೆ ಹಳಿ ಬೇಲಿಯ ಮೂಲಕ ನುಸುಳಿ ಬರುತ್ತಿವೆ. ತಡೆಗೋಡೆಗೆ ಮೆಸ್ ಅಳವಡಿಸಲು ಅರಣ್ಯ ಇಲಾಖೆಗೆ ಸೂಚಿಸುವಂತೆ ದೊಡ್ಡಹೆಜ್ಜೂರು ಎಪಿಎಂಸಿ ಮಾಜಿ ಅಧ್ಯಕ್ಷ ಮುದಗನೂರು ಸುಭಾಷ್, ಗ್ರಾಪಂ ಉಪಾಧ್ಯಕ್ಷ ವೆಂಕಟೇಶ್ ಸೇರಿದಂತೆ ರೈತರು ಮನವಿ ಮಾಡಿದರು. ಸ್ಥಳದಲ್ಲಿದ್ದ ವೀರನಹೊಸಳ್ಳಿ ಆರ್‌ಎಫ್‌ಒ ಅಭಿಷೇಕ್ ಅವರಿಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದರು.