ಜಿಲ್ಲೆ

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಚನ್ನರಾಯಪಟ್ಟಣ : ಕಿರೀಸಾವೆ ಗಡಿಯಿಂದ ಉಳ್ಳಾವಳ್ಳಿ ಗ್ರಾಮದ ವರಗೆ ಆಯ್ದ ಭಾಗಗಳಲ್ಲಿ 6 ಕಿಮೀ ರಸ್ತೆಯನ್ನು ಪಿಡಬ್ಲ್ಯುಡಿ ಇಲಾಖೆ ವತಿಯಿಂದ 6.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ 6.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಉಳ್ಳಾವಳ್ಳಿ ಗ್ರಾಮದ ಊರ ಮುಂಭಾಗದಲ್ಲಿ 400 ಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗುವುದು ಎಂದರು.


ಗ್ರಾಮದ ಕಾಲನಿಯ ಮುಖ್ಯರಸ್ತೆ ಹಾಗೂ ಬೀದಿಗಳಿಗೆ ಕಾಂಕ್ರಿಟ್ ರಸ್ತೆ ನಿರ್ಮಿಸುವುದರ ಜತೆಗೆ ಹೈಮಾಸ್ಕ್ ದೀಪ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಪಡಿಸಲಾಗುವುದು. ನರಿಹಳ್ಳಿ ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿರುವ ಉಲ್ಲಣೆಗೆ 8 ಸೀಮೆಂಟ್ ಪೈಪ್‌ಗಳನ್ನು ಅಳವಡಿಸಿ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.


ಇನ್ನು ಕೆರೆಯ ತೂಬು ಶಿಥಿಲಾವಸ್ಥೆ ತಲುಪಿದ್ದು ಕೆರೆಯಲ್ಲಿ ನೀರು ಕಡಿಮೆಯಾದ ನಂತರ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಗ್ರಾಮದೇವತೆಯ ದೇಗುಲ ನಿರ್ಮಾಣ ಕಾರ್ಯಕ್ಕೆ 2 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.


ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ಯೋಗೇಶ್, ಪಿಡಬ್ಲ್ಯುಡಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜಣ್ಣಗೌಡ, ಪ್ರಮುಖರಾದ ನಾಗರಾಜ್, ಎಚ್.ಎನ್.ಕುಮಾರ್, ತ್ಯಾಗರಾಜ್ ಹಾಗೂ ಇತರರು ಇದ್ದರು.