ಪಾಂಡವಪುರ: ತಾಲೂಕಿನ ಬಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಗ್ರಾಮಗಳಲ್ಲಿ ಅಂದಾಜು 6.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಬಳಘಟ್ಟ ಗ್ರಾಪಂ ವ್ಯಾಪ್ತಿಯ ಪಗಡೆಕಲ್ಲಹಳ್ಳಿ 65 ಲಕ್ಷ ರೂ., ರಾಂಪುರ 50 ಲಕ್ಷ ರೂ., ಸಿಂಗಾಪುರ 35 ಲಕ್ಷ ರೂ., ಗುಜುಗೋನಹಳ್ಳಿ 50 ಲಕ್ಷ ರೂ., ತಾಳೆಕೆರೆ 40 ಲಕ್ಷ ರೂ., ಚಲ್ಲರಹಳ್ಳಿಕೊಪ್ಪಲು 35 ಲಕ್ಷ ರೂ., ಅಂದಾನಿಗೌಡಕೊಪ್ಪಲು 40 ಲಕ್ಷ ರೂ., ಕನಗೋನಹಳ್ಳಿ 10 ಲಕ್ಷ ರೂ., ಮದೇನಹಳ್ಳಿ 80 ಲಕ್ಷ ರೂ., ನಾಣಾಪುರ 35 ಲಕ್ಷ ರೂ., ಬಿ.ಕೊಡಹಳ್ಳಿ 80 ರೂ., ಬಿ.ಆರ್.ಕೊಪ್ಪಲು 50 ಲಕ್ಷ ರೂ. ಹಾಗೂ ಬಳಘಟ್ಟ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿಯ ರಸ್ತೆಗಳ ಅಭಿವೃದ್ಧಿಗೆ ಭೂಮಿಪೂಜೆ ಸಲ್ಲಿಸಿದರು.
ಬಳಿಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ತಾಲೂಕಿನ ಬಳಘಟ್ಟ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸಾಕಷ್ಟು ಹಿಂದುಳಿದ ಗ್ರಾಮಗಳಾಗಿವೆ. ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಅಧ್ವಾನಗೊಂಡಿದ್ದವು. ಹೀಗಾಗಿ ವೈರಮುಡಿ ಉತ್ಸವಕ್ಕೆ ಬಿಡಿಗಡೆಯಾಗಿ ಉಳಿದ ಅನುದಾನ 6.50 ಕೋಟಿ ರೂ.ವೆಚ್ಚದಲ್ಲಿ ಗ್ರಾಮ ಪರಿಮಿತಿಯ ರಸ್ತೆಗಳ ಅಭಿವೃದ್ಧಿಗೆ ಭೂಮಿಪೂಜೆ ಸಲ್ಲಿಸಿದ್ದೇನೆ. ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೂ ಕ್ರಮವಹಿಸಲಾಗುವುದು ಎಂದರು.
ಪಾಂಡವಪುರ-ಕೆ.ಆರ್.ಪೇಟೆ ರಸ್ತೆಯಲ್ಲಿ ಸಾಕಷ್ಟು ಗುಂಡಿಬಿದ್ದು ವಾಹನ ಸಂಚಾರಕ್ಕೆ ಅನಾನೂಕೂಲವಾಗಿದ್ದ ಹಿನ್ನೆಲೆಯಲ್ಲಿ ಮೊದಲು ಆ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಪಾಂಡವಪುರ-ಮಂಡ್ಯ ರಸ್ತೆಯೂ ಗುಂಡಿಬಿದಿದ್ದೆ. ಆ ರಸ್ತೆಯಲ್ಲಿ ಎಲ್ ಆ್ಯಂಡ್ ಟಿ ಕಂಪನಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿರುವುದರಿಂದ ಅದು ಮುಗಿದ ಬಳಿಕ ರಸ್ತೆಗೆ ಡಾಂಬರೀಕರಣ ನಡೆಯಲಿದೆ. ಅಲ್ಲದೆ ತಾಲೂಕಿನ ಹಲವು ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಬಳಘಟ್ಟ ಏತನೀರಾವರಿ ಯೋಜನೆಯಲ್ಲಿ ಬಳಘಟ್ಟ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲು ಸಣ್ಣ ಪೈಪ್ ಅಳವಡಿಕೆ ಮಾಡಿದ್ದು ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಆ ಬಗ್ಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಳಘಟ್ಟ ಗ್ರಾಪಂ ವ್ಯಾಪ್ತಿಯ ಹಳ್ಳಿಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಕನಗೋನಹಳ್ಳಿನ ಪರಮೇಶ್, ಜಕ್ಕನಹಳ್ಳಿ ಚಂದ್ರಶೇಖರ್, ರೈತಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕೋಕಿಲಾ ಜ್ಞಾನೇಶ್ ಭಾಗವಹಿಸಿದ್ದರು.