ಜಿಲ್ಲೆ

ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ

ಚನ್ನರಾಯಪಟ್ಟಣ: ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಹೆಚ್ಚಿನ ಅನುದಾನ ತಂದು ತಾಲೂಕು ವ್ಯಾಪ್ತಿ 440 ಕಿಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಅವರ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿಗೊಳಿಸಲಾಗಿದೆ ಎಂದರು.


ಕಳೆದ ಬಾರಿ ಪೂರ್ವ ಮುಂಗಾರಿನಿಂದಲೂ ವ್ಯಾಪಕವಾಗಿ ಸುರಿದ ಮಳೆಯ ಪರಿಣಾಮ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು ಸೇತುವೆಗಳು ಸಹ ಕೊಚ್ಚಿ ಹೋಗಿದ್ದವು. ಪಿಡಬ್ಲ್ಯುಡಿ, ಜಿಪಂ ಹಾಗೂ ವಿವಿಧ ಇಲಾಖೆಯ ಯೋಜನೆಗಳಡಿ ಲಭ್ಯವಿರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಅಗಲೀಕರಣದೊಂದಿಗೆ ದುರಸ್ತಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.


ಗಡಿಭಾಗದ ಗ್ರಾಮಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಹಿರೀಸಾವೆಯಿಂದ ಹೊನ್ನಮಾರನಹಳ್ಳಿ, ಗೌಡರಹಳ್ಳಿ ಹಾಗೂ ಉಳ್ಳಾವಳ್ಳಿ ಮಾರ್ಗವಾಗಿ ಸಾರಿಗೆ ಬಸ್ ಸಂಚಾರಕ್ಕೆ ಕಳೆದ ವಾರ ಚಾಲನೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೊನ್ನಶೆಟ್ಟಿಹಳ್ಳಿ, ಗೌಡರಹಳ್ಳಿ, ಉಳ್ಳಾವಳ್ಳಿ, ಬಿದರಕೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆಯ್ದಭಾಗಗಳಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಮಳೆಯಿಂದ ಹಾನಿಯಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನ ತರಲಾಗುವುದು ಎಂದು ಭರವಸೆ ನೀಡಿದರು.


ಜೆಡಿಎಸ್ ತಾಲೂಕು ಅಧ್ಯಕ್ಷ ಪರಮದ ದೇವರಾಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ವಿಮಲಾ, ಪ್ರಮುಖ ಮುಖಂಡರಾದ ಪಿ.ಕೆ.ಮಂಜೇಗೌಡ, ತಿಮ್ಮೇಗೌಡ, ರುದ್ರೇಗೌಡ ಹಾಗೂ ಇತರರು ಇದ್ದರು.