ಚಿತ್ರದುರ್ಗ: ನಗರದ ಹೊರವಲಯ ರಾ.ಹೆ.48ರ ವಿಜಾಪುರ ಗೊಲ್ಲರಹಟ್ಟಿ ಬಳಿ ಸೋಮವಾರ ಬೆಳಗ್ಗೆ 7.30ರ ಸಮಯದಲ್ಲಿ ಆದ ರಸ್ತೆ ಅಪಘಾತದಲ್ಲಿ ಹಸುಗೂಸು ಸೇರಿ ಮೂವರು ಅಸು ನೀಗಿದ್ದಾರೆ.
ಗೋವಾದಿಂದ ಬೆಂಗಳೂರಿಗೆ ಮರುಳುತ್ತಿದ್ದ ಕಾರು, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು, ಬೆಂಗಳೂರು ಎಚ್‌ಎಸ್‌ಆರ್ ಲೇ ಔಟ್‌ನ ಜಾಕೀರ್‌ಅಹಮದ್ (60), ತಬಸೂಮ್‌ಭಾನು (28) ಹಾಗೂ 3 ತಿಂಗಳ ಮಗು ಆಯತ್ ಫಾತೀಮಾ ಮೃತಪಟ್ಟಿದ್ದಾರೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಜಿಲ್ಲಾಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ.
ದುರ್ಘಟನೆಯಲ್ಲಿ ಗಾಯಗೊಂಡಿರುವ ನಾಜಿಯಾ, ಇಮ್ರಾನ್ ಖಾನ್, ಶೋಯಬ್ ಅಹಮದ್, ತಬ್ರೀಜ್ ಅಹಮದ್, ಶಬಾ ಎಂಬುವವರು ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ಕುಟುಂಬದ ಈ ಎಲ್ಲರೂ ಗೋವಾದಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ, ಲಾರಿ ಚಾಲಕ ಸಿಗ್ನಲ್ ನೀಡದೆ ಏಕಾಏಕಿ ಲಾರಿಯನ್ನು ಬಲಪಥದಲ್ಲಿ ಚಲಾಯಿಸಿದ್ದು, ಅವಘಡಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್‌ಪಿ ಕೆ.ಪರಶುರಾಮ್ ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.