ಜಿಲ್ಲೆ

ರಸ್ತೆ ಅಪಘಾತ ನಿಯಂತ್ರಣಕ್ಕೆ ಸಹಕರಿಸಿ

ಬೀದರ್: ಸಂಚಾರ ನಿಯಮ ಪಾಲಿಸುವ ಮೂಲಕ ಸಾರ್ವಜನಿಕರು ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಬಗದಲ್ ಠಾಣೆ ಪಿಎಸ್‍ಐ ಸಂಗೀತಾ ಶಿಂಧೆ ಮನವಿ ಮಾಡಿದರು.
ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಗದಲ್ ಪೊಲೀಸ್ ಠಾಣೆ ವತಿಯಿಂದ ರಸ್ತೆ ಅಪಘಾತ ತಡೆ ಮಾಸಾಚರಣೆ ನಿಮಿತ್ತ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ಅವರು ಮಾತನಾಡಿದರು.
ವಾಹನ ಚಾಲನೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕು. ದ್ವಿಚಕ್ರ ಚಲಾಯಿಸುವಾಗ ಹೆಲ್ಮೆಟ್, ನಾಲ್ಕು ಚಕ್ರದ ವಾಹನ ಓಡಿಸುವಾಗ ಸೀಟ್ ಬೆಲ್ಟ್ ಧರಿಸಬೇಕು. ಸಂಚಾರ ಸಂಕೇತಗಳನ್ನು ಅನುಸರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಸಬಾರದು. ಅತಿ ವೇಗ, ಮದ್ಯಪಾನ ಮಾಡಿ ವಾಹನ ಓಡಿಸಬಾರದು ಎಂದು ತಿಳಿಸಿದರು.
ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳನ್ನು ಪಾಲಿಸುವ ಶಪಥ ಬೋಧಿಸಲಾಯಿತು.
ಬಗದಲ್ ಠಾಣೆ ಎಎಸ್‍ಐ ಅನಿತಾ, ಸಿಬ್ಬಂದಿ ಅಶೋಕ, ಪ್ರಭು ರೆಡ್ಡಿ, ವಿಠ್ಠಲ್, ಬೀದರ್ ಮೈನಾರಿಟಿ ಸ್ಪೊಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ, ಸಚಿನ್ ಬಾವಿದೊಡ್ಡಿ ಮೊದಲಾದವರು ಇದ್ದರು.