ಜಿಲ್ಲೆ

ರಸ್ತೆ ಅಗೆದು 3 ತಿಂಗಳಾದರು ಆಗಿಲ್ಲ ದುರಸ್ತಿ:ಅವ್ಯವಸ್ಥೆ ವಿರುದ್ಧ ನಿವಾಸಿಗಳ ಆಕ್ರೋಶ

ಹಾಸನ : ನಗರದ ಸ್ಲೇಟರ್ಸ್‌ ಹಾಲ್ ಪಕ್ಕದ ಚರ್ಚ್ ಹಿಂಭಾಗದ ರಕ್ಷಣಾಪುರಂ ಬಡಾವಣೆಯ ರಸ್ತೆಯನ್ನು ಅಗೆದು ಮೂರು ತಿಂಗಳು ಕಳೆದಿದ್ದರೂ, ಇನ್ನೂ ದುರಸ್ತಿ ಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಹತ್ತು ವರ್ಷವಾದರೂ ಹಾಳಾಗದ ರೀತಿಯಲ್ಲಿ ಈ ಮೊದಲು ಮಾಡಿದ್ದ ರಸ್ತೆ ಇತ್ತು. ಅದನ್ನು ಅಭಿವೃದ್ಧಿ ಪಡಿಸುವ ಕಾರಣ ನೀಡಿ ಅಗೆಯಲಾಯಿತು. ಆದರೆ ಮೂರು ತಿಂಗಳಾದರೂ ಸರಿಪಡಿಸದೇ ಇರುವುದರಿಂದ ಪ್ರತಿನಿತ್ಯ ನಿವಾಸಿಗಳು ಮತ್ತು ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಮಳೆ ಬಂದರೆ ರಸ್ತೆ ಉದ್ದಕ್ಕೂ ನೀರು ನಿಲ್ಲಲಿದೆ. ಇದರಿಂದ ಅನೇಕ ಕಾಯಿಲೆಗಳು ಮತ್ತು ಸಮಸ್ಯೆಗಳು ಉದ್ಭವಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದಲ್ಲದೇ ಲೋಕಾಯುಕ್ತಕ್ಕೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಪುರುಷೋತ್ತಮ್, ಮೂರು ತಿಂಗಳ ಹಿಂದೆ ರಸ್ತೆ ಅಗೆದು ಗುತ್ತಿಗೆದಾರರು ಹೊರಟು ಹೋಗಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಕೂಡ ಆಸಕ್ತಿ ವಹಿಸುತ್ತಿಲ್ಲ ಎಂದು ದೂರಿದರು.

ರಸ್ತೆ ಅಗೆದಿರುವುದಿಂದ ಮಳೆ ಬಂದರೆ ಕೆಸರಿನ ಹಾದಿಯಾಗಲಿದೆ. ಇದರಿಂದ ನಾನಾ ಸಮಸ್ಯೆ ಎದುರಿಸುವಂತಾಗಿದೆ. ಕಾಮಗಾರಿ ವಿಳಂಬದ ಬಗ್ಗೆ ಕೇಳಿದರೆ ನಲ್ಲಿ ಪೈಪ್ ಒಡೆದು ಹೋಗಿದೆ ಎಂದು ಕಾರಣ ಹೇಳುತ್ತಾರೆ. ನಗರಸಭೆ ಆಯುಕ್ತರ ಜೊತೆ ಮಾಡಿದರೆ ಬಂದು ಪರಿಶೀಲಿಸುವುದಾಗಿ ಹೇಳುತ್ತಾರೆಯೇ ಹೊರತು, ಇಲ್ಲಿಯವರೆಗೂ ಆಗಮಿಸಿಲ್ಲ ಎಂದು ಬೇಸರ ಹೊರ ಹಾಕಿದರು.

ಗುತ್ತಿಗೆದಾರರಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಚೆನ್ನಾಗಿದ್ದ ರಸ್ತೆಯನ್ನು ಅಗೆದು ಈ ರೀತಿ ಅವ್ಯವಸ್ಥೆ ಹಾದಿ ಮಾಡಲು ಹೇಳಿದ್ದು ಯಾರು, ಜಿಲ್ಲಾಡಳಿತ ಏನು ಮಾಡುತ್ತಿದೆ. ಹಿಂದೆ ಇದ್ದ ರಸ್ತೆ ಮೇಲೆಯೇ ಒಂದು ಲೇಯರ್ ಡಾಂಬರ್ ಹಾಕಿದ್ದರೆ ರಸ್ತೆ ಉತ್ತಮವಾಗುತ್ತಿತ್ತು. ಹಾಗೆ ಮಾಡದೆ ಅಗೆದಿರುವವರು ಬೇಗ ದುರಸ್ತಿ ಮಾಡಲಿ ಎಂದು ಒತ್ತಾಯಿಸಿದರು.

ಮತ್ತೊಬ್ಬ ನಿವಾಸಿ ಜಗದೀಶ್ ಮಾತನಾಡಿ, ಇಂತಹ ಕಳಪೆ ಕೆಲಸ ಮಾಡಿರುವವರು ನಾಗರಿಕರಾ, ಅನಾಗರಿಕರಾ ಗೊತ್ತಿಲ್ಲ. ರಸ್ತೆ ಅಭಿವೃದ್ಧಿ ಮಾಡಬೇಕಾದರೆ ಯಾರನ್ನೂ ಕೇಳಿಲ್ಲ. ಇದು ಜನವಸತಿ ಜಾಗವಾಗಿದ್ದು, ಇಂತಹ ಅವ್ಯವಸ್ಥೆ ಮಾಡಿದರೆ ನಾವು ಇರಬೇಕಾ, ಹೋಗಬೇಕಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ವಸಂತ್ ಮಾಧವ್, ಹೆನಾಲಿ, ನವೀನ್ ಕುಮಾರ್ ಇತರರು ಇದ್ದರು.