ಎನ್.ಆರ್.ಪುರ: ತಾಲೂಕಿನಲ್ಲಿ ರಸಗೊಬ್ಬರದ ಸಮಸ್ಯೆ ಇದ್ದರೆ ರೈತರು ಕೃಷಿಕ ಸಮಾಜದ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ಭರವಸೆ ನೀಡಿದರು.
ಕೃಷಿ ಇಲಾಖೆ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿಯ ದ್ವೈಮಾಸಿಕ ಸಭೆಯಲ್ಲಿ ಮಾತನಾಡಿ, ಕೃಷಿಕ ಸಮಾಜ ರೈತರ ಅಭಿವೃದ್ಧಿಗೆ ಶ್ರಮಿಸಲಿದೆ. ರಸಗೊಬ್ಬರದ ಕೊರತೆ, ಕಳಪೆ ರಸಗೊಬ್ಬರದಂಥ ಯಾವುದೇ ಸಮಸ್ಯೆ ಇದ್ದರೂ ಮಾಹಿತಿ ನೀಡಿ ಎಂದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮಾತನಾಡಿ, ಕೃಷಿಕ ಸಮಾಜದ ಸಭೆಗೆ ಸಂಬಂಧಪಟ್ಟ ಎಲ್ಲ ಇಲಾಖೆಯ ಮುಖ್ಯ ಅಧಿಕಾರಿಗಳು ಹಾಜರಾಗಿ ಮಾಹಿತಿ ನೀಡಬೇಕು. ಸಭೆಗೆ ಗೈರಾದವರಿಗೆ ತಿಳಿವಳಿಕೆ ಪತ್ರ ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಅವರಿಗೆ ತಿಳಿಸಿದರು.
ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್ ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಅಡಕೆ ಸುಲಿಯುವ ಯಂತ್ರ, ಅಡಕೆ ಪಾಲಿಷ್ ಮಾಡುವ ಯಂತ್ರ, ಕೊನೆ ತೆಗೆಯುವ ದೋಟಿಗೆ ಸಹಾಯಧನ ಲಭ್ಯವಿದೆ. ಜೇನುಪೆಟ್ಟಿಗೆ ಲಭ್ಯವಿದ್ದು ಒಬ್ಬ ರೈತರಿಗೆ 2 ಪೆಟ್ಟಿಗೆ ವಿತರಣೆ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯಡಿ ಗಿಡಗಳ ವಿತರಣೆ, ತುಂತುರು ನೀರಾವರಿ ಯೋಜನೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಮಹೇಶ್ ಮಾಹಿತಿ ನೀಡಿ, ಜನವರಿಯಿಂದ ಇಲ್ಲಿಯವರೆಗೆ ಈ ವಷರ್ ಎರಡು ಪಟ್ಟು ಮಳೆಯಾಗಿದೆ. ರೈತರಿಗೆ ಇಲಾಖೆಯಿಂದ ಭತ್ತದ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ರೈತರು ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಜ್ಯೇಷ್ಠತೆಗೆ ಅನುಸಾರ ಸವಲತ್ತು ಪಡೆಯಬಹುದಾಗಿದೆ ಎಂದರು.
2024-25ನೇ ಸಾಲಿನ ಸ್ಪಿಂಕ್ಲರ್, ಪಿವಿಸಿ ಪೈಪ್ಸ್ ನಮೂನೆಯನ್ನು ಸ್ಪೈಟ್ ಮೈಸೂರು ಅವರಿಗೆ ಸಲ್ಲಿಸಲಾಗಿದ್ದು ವರದಿ ಬಂದಿದೆ. ಯಾವುದೇ ಕಳಪೆ ಕಂಡುಬಂದಿಲ್ಲ ಎಂದರು.
ಪಶುಪಾಲನಾ ಇಲಾಖೆ ಹಸು ಪರೀಕ್ಷಕ ಎನ್.ಟಿ.ಶೇಷಾಚಲ ಮಾಹಿತಿ ನೀಡಿ, ಜಾನುವಾರುಗಳು ಆಕಸ್ಮಿಕವಾಗಿ ಮರಣ ಸಾವನ್ನಪ್ಪಿದರೆ 15 ಸಾವಿರ ರೂಪಾಯಿ ಸಹಾಯಧನ, ಕುರಿ ಮತ್ತು ಮೇಕೆಗಳು ಸಾವನ್ನಪ್ಪಿದರೆ 7,500 ರೂ. ಸಹಾಯಧನ ನೀಡಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕ ನಿರಂಜನ್‌ಮೂರ್ತಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ಕಾಂತರಾಜ್, ಪಿಸಿಎಆರ್‌ಡಿ ಬ್ಯಾಂಕ್ ವ್ಯವಸ್ಥಾಪಕ ಪ್ರದ್ಯುಮ್ನ ರೈತರಿಗೆ ಮಾಹಿತಿ ನೀಡಿದರು.
2022-23ನೇ ಸಾಲಿನ ಆತ್ಮ ಯೋಜನೆಯಡಿ ಕೃಷಿ ಪ್ರಶಸ್ತಿ ಪಡೆದ ಬಿ.ವಿ.ದಿನೇಶ್‌ಕುಮಾರ್ ಅವರಿಗೆ ಕೃಷಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ.ಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್, ಖಜಾಂಚಿ ಬಿ.ಎಸ್.ಚೇತನ್, ಕಾರ್ಯಕಾರಿ ಸಮಿತಿ ಸದಸ್ಯರಾದ ವೈ.ಎಸ್.ಸುಬ್ರಹ್ಮಣ್ಯ, ಎಚ್.ಆರ್.ತಿಮ್ಮಯ್ಯ, ಎನ್.ಎಲ್.ತೀರ್ಥೇಶ್, ಎಚ್.ಎಂ.ನಾಗರಾಜ್, ಎನ್.ಪಿ.ರಮೇಶ್, ವೈ.ಎಸ್.ರವಿ, ಎನ್.ಎಸ್.ರಂಜಿತ್, ಎಂ.ವಿ.ಶ್ರೀನಿವಾಸ್ ಇದ್ದರು.